ನೇಕಾರರು ಆರ್ಥಿಕ ಸ್ವಾವಲಂಬಿಗಳಾಗಲಿ

BLY- 2-4
ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ರಾಜ್ಯಮಟ್ಟದ ವಿಶೇಷ ಕೈಮಗ್ಗ ಮೇಳ ವಸ್ತ್ರಸಿರಿ-2024 ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಚಾಲನೆ ನೀಡಿದರು.
Published on

ಬಳ್ಳಾರಿ: ನೇಕಾರರು ಆರ್ಥಿಕ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಸರ್ಕಾರಗಳು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಲಿಂಗರಾಜು ಹೇಳಿದರು.

ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಕೇಂದ್ರ ಜವಳಿ ಮಂತ್ರಾಲಯ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿ,(ಕಾವೇರಿ ಹ್ಯಾಂಡಲೂಮ್ಸ್), ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ರಾಜ್ಯಮಟ್ಟದ ವಿಶೇಷ ಕೈಮಗ್ಗ ಮೇಳ ವಸ್ತ್ರಸಿರಿ-2024 ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ 52 ಸಾವಿರ ಕೈಮಗ್ಗ ನೇಕಾರರ ಕುಟುಂಬಗಳಿವೆ. ಅವರೆಲ್ಲ ನೇಕಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇಂದಿನ ಆಧುನಿಕ ಯುಗದಲ್ಲಿ ನೇಕಾರರು ಅನೇಕ ಸಂಕಷ್ಟವನ್ನು ಎದುರಿಸುತ್ತಾರೆ. ಪರಿಸರ ಸ್ನೇಹಿಯಾಗಿ ಕೆಲಸ ಮಾಡುತ್ತಿರುವ ನೇಕಾರರಿಗೆ ಸರ್ಕಾರದಿಂದ ಅನೇಕ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜವಳಿ ಮಂತ್ರಾಲಯದ ನೇಕಾರರ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಮಾರಿಮುತ್ತು ಮಾತನಾಡಿ, ರೈತರು ಮತ್ತು ನೇಕಾರರು ಇಬ್ಬರೂ ಬಡವರ್ಗದವರಾಗಿದ್ದು, ಸ್ವಾವಲಂಬಿ ಬದುಕುಗಾಗಿ ತಾವೇ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದು ಅತ್ಯಂತ ಶ್ಲಾಘನೀಯ ಕೆಲಸ. ಇದರಿಂದ ಅನೇಕ ಉತ್ಪಾದಕರಿಗೆ ನೇರವಾಗಿ ಮಾರುಕಟ್ಟೆಯಲ್ಲಿ ಮತ್ತು ಉದ್ಯಮದಲ್ಲಿ ತೊಡಗಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಬಿ.ವಿಠಲ್‌ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಜ.2ರಿಂದ 15ರ ವರೆಗೆ 14 ದಿನಗಳ ವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಸಾರ್ವಜನಿಕರು ಮತ್ತು ನಗರವಾಸಿಗಳು ‘ಕೈ ಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಉಪ ಮೇಯರ್ ಬಿ.ಜಾನಕಿ ಮಳಿಗೆಗಳನ್ನು ಸಾಂಕೇತಿಕವಾಗಿ ಚಾಲನೆ ನೀಡಿದರು. ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಕಾವೇರಿ ಹ್ಯಾಂಡ್‌ಲೂಮ್ಸ್ನ ಅಧ್ಯಕ್ಷ ಬಿ.ಜೆ.ಗಣೇಶ್, ಮಾಜಿ ಅಧ್ಯಕ್ಷ ಎನ್.ವಿರೂಪಾಕ್ಷಪ್ಪ, ಉತ್ತರ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ವೀರೇಶ್ ಎಸ್.ಢವಳೆ, ಮಹಾಂತೇಶ್ ಕಂಚಿನಮಠ, ಪಾಲಿಕೆ ಸದಸ್ಯ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net