

ಗುಳೇದಗುಡ್ಡ: ನೇಕಾರ ಸಮಾಜಕ್ಕೆ ರಾಜಕೀಯ ಶಕ್ತಿ ಕೊರತೆ ಇದೆ. ಸಮಾಜದಲ್ಲಿ ಸಂಟನೆಯಾದಾಗ ಮಾತ್ರ ರಾಜ್ಯದಲ್ಲಿ ನೇಕಾರ ಸಮಾಜ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠದಲ್ಲಿ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಒಳಪಂಗಡಗಳು ಸೇರಿ ಸಮಾಜದಲ್ಲಿ ಒಗ್ಗಟ್ಟು ಮೂಡಬೇಕಿದೆ. ಎಲ್ಲ ನೇಕಾರರು ಒಂದು ಎನ್ನುವ ಕೂಗು ಕೇಳಿದಾಗ ಮಾತ್ರ ನೇಕಾರರಿಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಶಕ್ತಿ ದೊರೆಯುತ್ತದೆ. ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ನೇಕಾರರಿದ್ದು ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಸಂಘಟಿತ ಹೋರಾಟದಿಂದ ರಾಜಕೀಯ ಪ್ರಾಬಲ್ಯ ದೊರಕಿಸಿಕೊಳ್ಳಲು ಸಾಧ್ಯ ಎಂದರು.
ಡಿ. ದೇವರಾಜ ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಕೀರ್ತಿ ಗಣೇಶ ಸನ್ಮಾನ ಸ್ವೀಕರಿಸಿ ಮಾತನಾಡಿ, ನೇಕಾರರಲ್ಲಿ ಒಗ್ಗಟ್ಟು ಮೂಡಿಸುವ ಹಾಗೂ ನೇಕಾರರಿಗೆ ಹೆಚ್ಚು ಸರ್ಕಾರಿ ಸೌಲಭ್ಯಗಳು ಸಿಗುವಂತೆ ಮಾಡುತ್ತೇನೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೆಚ್ಚು ಶ್ರಮಿಸುತ್ತೇನೆ. ನಿಗಮದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ನೇಕಾರರಿಗೆ ದೊರಕಿಸಿಕೊಡುತ್ತೇನೆ ಎಂದರು.
ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಮಾತನಾಡಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಜಿ. ಬಿರಾದಾರ, ಅಧ್ಯಕ್ಷರ ಆಪ್ತ ಸಹಾಯಕ ಲಕ್ಷ್ಮೀಕಾಂತ ಕೆಂದೂರ, ತಾಲೂಕು ಅಭಿವೃದ್ಧಿ ಅಧಿಕಾರಿ ಮಹಾಂತೇಶ ಶಿವನಕ್ಕನವರ, ಜಿಲ್ಲಾ ಅಭಿವೃದ್ಧಿ ಅಧಿಕಾರಿ ಗುರುರಾಜ ಕುಲಕರ್ಣಿ, ರವಿ ಬಾಡಗಿ, ನಾರಾಯಣ ದಡಿ, ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ವಿವೇಕಾನಂದ ಹುಲ್ಯಾಳ ಇದ್ದರು.