'ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಾಗಲಿ'

15
Published on

ಮೈಸೂರು: ಹಿಂದಿನ ಚುನಾವಣೆಗಳಲ್ಲಿ ನಗರ ಪ್ರದೇಶದಲ್ಲಿ ಮತದಾನ ಕಡಿಮೆ ಅಗಿದ್ದು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಚುನಾವಣಾ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.
ಮತದಾರ ಪಟ್ಟಿ, ಚುನಾವಣಾ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮೈಸೂರು ನಗರ ವ್ಯಾಪ್ತಿಯ ಚಾಮರಾಜ, ನರಸಿಂಹರಾಜ ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ಮತಗಟ್ಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನವಾಗಿತ್ತು. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಅಧಿಕಾರಿಗಳು ಕಾರ್ಯತಂತ್ರ ರೂಪಿಸಬೇಕು ಎಂದು ಸಲಹೆ ನೀಡಿದರು.
ನಗರದ ಕೆಲ ಮತಗಟ್ಟೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನವಾಗಿದ್ದು, ಆ ಭಾಗಗಳ ಕೊರತೆಗಳನ್ನು ಗಮನಿಸುವುದರೊಂದಿಗೆ ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳುವ ಮೂಲಕ ಮತದಾನ ಪ್ರಮಾಣ ವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಿಂದಿನ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿರುವ ಸ್ಥಳಗಳಿಗೆ ತೆರಳಿ ಸಮಗ್ರವಾಗಿ ಪರಿಶೀಲಿಸಿ 10 ದಿನದೊಳಗಾಗಿ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಚುನಾವಣಾ ಆಯೋಗದ ಟೋಲ್ ಫ್ರೀ ನಂಬರ್ 1950 ಅನ್ನು ಎಲ್ಲೆಡೆ ಪ್ರಚಾರ ಮಾಡುವ ಮೂಲಕ ಮತದಾರರ ಯಾವುದೇ ತೊಂದರೆಗೆ ಅನುಕೂಲವಾಗುವಂತೆ ಪ್ರಚುರಪಡಿಸಿ ಹಾಗೂ ವೋಟರ್ ಹೆಲ್ಪ್‌ಲೈನ್ ಮಾಹಿತಿಯನ್ನು ಹೆಚ್ಚು ಪ್ರಚುರಪಡಿಸಿ. ಅಂಚಿನಲ್ಲಿರುವ (ಮಾರ್ಜಿನಲ್) ಮತದಾರರು, ವಿಕಲಚೇತನರು, ಕುಷ್ಠರೋಗದಿಂದ ಗುಣಮುಖರಾದವರು, ಲಿಂಗ ಅಲ್ಪಸಂಖ್ಯಾತರು ಮುಂತಾದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ನೋಂದಣೆ ಮಾಡುವಂತೆ ತಿಳಿಸಿದರು.
18 ವರ್ಷ ಪೂರೈಸಿರುವವರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವುದು ಹಾಗೂ ಪಟ್ಟಿಯಲ್ಲಿ ಹೆಸರಿರುವವರು ಮತದಾನ ಮಾಡುವಂತೆ ನೋಡಿಕೊಳ್ಳುವುದು, 17 ವರ್ಷ ಪೂರೈಸಿರುವವರು ವರ್ಷದಲ್ಲಿ 4 ಬಾರಿ ಮತದಾರರ ಪಟ್ಟಿಗೆ ಸೇರಲು ಅವಕಾಶವಿದ್ದು, ಮಹಿಳಾ ಮತದಾರರೂ ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವಿಎಚ್‌ಎ ಆ್ಯಪ್ ಬಳಸುವುದರಿಂದ ಅಭ್ಯರ್ಥಿಗಳ ಮಾಹಿತಿ, ಇವಿಎಂ ಬಗೆಗಿನ ಮಾಹಿತಿ ಹಾಗೂ ಆಯೋಗ ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳಬಹುದು. ಆಯೋಗ ಸಿದ್ಧಪಡಿಸಿರುವ ಹಿಂದಿ ಅವತರಣಿಕೆಯ ಮೆ ಭಾರತ್ ಹೂ ಹಾಗೂ ಕನ್ನಡದ ನಾ ಭಾರತ, ಭಾರತ ನನ್ನಲ್ಲಿ, ನಾ ಜಾಗೃತ, ಜಾಗೃತಿ ನನ್ನಲ್ಲಿ ಎಂಬ ಹಾಡನ್ನು ಎಲ್ಲೆಡೆ ಪ್ರಚುರಪಡಿಸಿ ಮತದಾನದಲ್ಲಿ ಎಲ್ಲರೂ ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್, ಜಿಪಂ ಉಪಕಾರ್ಯದರ್ಶಿ ಕೃಷ್ಣಂರಾಜು, ನಗರಪಾಲಿಕೆ ಉಪ ಆಯುಕ್ತ ಸೋಮಶೇಖರ್, ಮಾಸ್ಟರ್ ಟ್ರೈನರ್ ಶಾಂತ, ಚುನಾವಣಾ ಶಿರಸ್ತೇದಾರ್ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net