

ಹುಬ್ಬಳ್ಳಿ : ಯುವಜನರು ಭಾರತೀಯ ಸಂಸ್ಕೃತಿಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಾಲಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾಡಬೇಕು ಎಂದು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಬ್ಬಳ್ಳಿಯ ಕಚೇರಿ ಕೇಶವ ಕುಂಜದಲ್ಲಿ ಶುಕ್ರವಾರದಂದು ಸಂಘದ ಹಿರಿಯ ಸ್ವಯಂ ಸೇವಕರನ್ನು ಭೇಟಿ ಮಾಡಿ, ಅವರು ಮಾತನಾಡಿದರು.
ಮಕ್ಕಳು ಶಾಲೆಯೇ ಆಗಲಿ ಅಥವಾ ಮನೆಯಲ್ಲಿಯೇ ಇರಲಿ ಭಾರತೀಯ ಸಂಸ್ಕೃತಿಯನ್ನು ಎಲ್ಲ ಸಮಯದಲ್ಲಿಯೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಸ್ವಯಂ ಸೇವಕರು ದೇಶ, ಸಮಾಜಕ್ಕಾಗಿಯೇ ತಮ್ಮನ್ನು ಅರ್ಪಿಸಿಕೊಂಡವರು. ಅವರಿಗೆ ಸೇವೆ ಮಾಡಲು ಅನೇಕ ಕ್ಷೇತ್ರಗಳು ಇವೆ. ಇದರಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸುವುದು ಸಹ ಒಂದಾಗಿದೆ ಎಂದರು.
ಸ್ವಯಂ ಸೇವಕರಲ್ಲಿ ಜಾತಿಯ ವ್ಯವಸ್ಥೆ ಇಲ್ಲ. ಯಾವುದೇ ಜಾತಿಯವನಾದರೂ ಸಂಘದ ಸ್ವಯಂ ಸೇವಕನಾಗಬಹುದು. ಎಲ್ಲ ಜಾತಿಗಳ ಮನೆಗಳಿಗೆ ಸ್ವಯಂ ಸೇವಕರು ಭೇಟಿ ನೀಡಿ, ಅಲ್ಲಿನವರಲ್ಲಿ ಸಂಘದ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಸಾಹಿತ್ಯ ರಚನೆ ಅಂದರೆ ಕೇವಲ ಕಥೆ ಬರೆಯುವುದು ಅಲ್ಲ. ಗಟ್ಟಿಯಾದ ಸಾಹಿತ್ಯ ರಚಿಸಬೇಕಾದೆ ಆಳ ಅಧ್ಯಯನದ ಅಗತ್ಯವಿದೆ. ಯುವ ಸಾಹಿತಿಗಳು ಹಿರಿಯ ಸಾಹಿತಿಗಳ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.
ನಾನು ಭಾರತೀಯ, ಯುರೋಪ್ ಹಾಗೂ ಗ್ರೀಕ್ ಇತಿಹಾಸ ಓದಿದ್ದೇನೆ. ಹೀಗಾಗಿ, ನನ್ನ ಅನೇಕ ಕಾದಂಬರಿಗಳಲ್ಲಿ ಇತಿಹಾಸ ಉಪಯೋಗಿಸಿಕೊಂಡಿದ್ದೇನೆ ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಭಾಷೆ, ನಾಡಿನ ಬಗ್ಗೆ ಬಾಲ್ಯಾವಸ್ಥೆಯಿಂದಲೇ ಹೇಳಿಕೊಡಬೇಕು. ಆದರೆ, ಕಳೆದ ಕೆಲ ವರ್ಷಗಳಿಂದ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಬೇಕು. ಇಂಗ್ಲಿಷ್ ಕಲಿತರ ಮಾತ್ರ ಜೀವನ ಎಂಬ ಮನೋಸ್ಥಿತಿಗೆ ಬಂದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಘದ ಪ್ರಮುಖರಾದ ಶ್ರೀಧರ ನಾಡಗೇರ, ಗೋವಿಂದಪ್ಪ ಗೌಡಪ್ಪಗೋಳ, ಶಿವಾನಂದ ಅವಟಿ, ನರೇಂದ್ರ, ಕಿರಣ ಗುಡ್ಡದಕೆರಿ, ಶ್ರೀನಿವಾಸ ಹಾಗೂ ಇತರರು ಉಪಸ್ಥಿತರಿದ್ದರು.