

ಶಿರಸಿ: ಲಲಿತಕಲೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯತೆ ಇದೆ. ಕಲಾವಿದರು ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಬೇಕಾಗಿದ್ದು, ಹಚ್ಚೇವು ದೃಶ್ಯಕಲೆ ದೀಪ ಎನ್ನುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.
ನಗರದ ರಂಗಧಾಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಸುವರ್ಣ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಮ್ಮೊಂದಿಗೆ ನಾವು ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ಕಲಾವಿಮರ್ಶೆ, ಶಾಲಾ ಮಕ್ಕಳ ಚಿತ್ರಕಲಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲಾವಿದರ ಚಿತ್ರಗಳಿಗೆ ಸಮಾಜ, ದೇಗುಲ, ಸಮಾಜ, ಸಂಘ-ಸಂಸ್ಥೆಗಳು ಪೋಷಣೆ ನೀಡಬೇಕು. ಬರಲಿರುವ ಆರ್ಥಿಕ ವರ್ಷದಲ್ಲಿ ಅಕಾಡೆಮಿಯಿಂದ ಇನ್ನಷ್ಟು ಕಾರ್ಯಕ್ರಮ ನಡೆಸುವುದು ನಮ್ಮ ಗುರಿಯಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಮುದಾಯದಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಅವಶ್ಯಕತೆಯಿದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಲಲಿತಕಲಾ ಅಕಾಡೆಮಿಯ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರು.
ಹಿರಿಯ ಕಲಾವಿದ ನಿರ್ನಳ್ಳಿ ಗಣಪತಿ ಮಾತನಾಡಿ, ಕಲಾವಿದರ ಜೊತೆಯಲ್ಲಿ ಕಲಾಭಿರುಚಿ, ಕಲಾಪ್ರಜ್ಞೆ, ಕಲಾಸಕ್ತಿ ಹೊಂದಿದವರು ಹೆಚ್ಚಬೇಕು. ಕಲೆ ಬಗ್ಗೆ ಎಷ್ಟೂ ಪ್ರಸಾರ ಆದರೂ ಕಡಿಮೆ. ಕಲೆ ಇಲ್ಲದಿದ್ದರೆ ಜೀವನವಿಲ್ಲ. ಸಂಸ್ಕೃತಿ ಉಳಿದಿರುವುದು ಕಲೆಯಿಂದ, ಕಲೆಯನ್ನು ಅನುಭವಿಸುವುದರಿಂದ ಶಿಸ್ತು, ಕ್ರಮಬದ್ಧತೆ, ಅಚ್ಚುಕಟ್ಟುತನ ಜತೆ ಕಲಾತಪಸ್ವಿಗಳಲ್ಲಿ ಏಕಾಗ್ರತೆ ಮೂಡುತ್ತದೆ. ಏಕಾಗ್ರತೆ ಸಿದ್ಧಿ ಮಾಡಿಕೊಳ್ಳಲು ಕಲೆಯೂ ಅವಶ್ಯಕ ಎಂದರು.
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಜಿ.ಟಿ. ಭಟ್ಟ, ಸುವರ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ ಶೇಟ್, ಚಿತ್ರ ಕಲಾವಿದರಾದ ಜಿ.ಎಂ. ಹೆಗಡೆ ತಾರಗೋಡ, ಜಿ.ಎಂ. ಬೊಮ್ನಳ್ಳಿ, ಪ್ರಕಾಶ ನಾಯಕ, ಸತೀಶ ಯಲ್ಲಾಪುರ ಇತರರಿದ್ದರು. ಸವಿತಾ ಜನ್ನು, ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಸಂಚಾಲಕಿ ಶಾಂತಾ ಪ್ರವೀಣ ಕೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಕಲಾವಿದ ನಾಗರಾಜ ಹನೇಹಳ್ಳಿ ಪ್ರಾತ್ಯಕ್ಷಿಕೆ ನಡೆಸಿದರು. ಕಲೆ ಮತ್ತು ಸಂಸ್ಕೃತಿ ಹಾಗೂ ಕಲಾವಿದನ ಬದುಕು ಕುರಿತು ಚಿತ್ರಕಲಾವಿದ ಶ್ರೀಧರ ಶೇಟ್ ವಿಮರ್ಶೆ ಮಾಡಿದರು. ರೇಖಾ ಭಟ್ಟ ನಾಡ್ಗುಳಿ ಗಾಯನ ಪ್ರಸ್ತುತಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಚಿತ್ರಕಲಾ ಶಿಬಿರ ಗಮನ ಸೆಳೆಯಿತು. 50 ರಷ್ಟು ಮಕ್ಕಳು ಕುಳಿತು ವಿವಿಧ ಚಿತ್ರಗಳನ್ನು ಬಿಡಿಸಿದರು. ಚಿತ್ರಕಲಾವಿದರ ಚಿತ್ರಗಳು ಆವಾರದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.