

ಕೆರೂರ: ಎಲ್ಲಿಯವರೆಗೆ ಗ್ರಾಮಗಳು ರಾಮರಾಜ್ಯ ಆಗುವುದಿಲ್ಲವೋ ಅಲ್ಲಿವರೆಗೆ ದೇಶದ ಅಭಿವೃದ್ಧಿ ಆಗಲ್ಲ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸಮೀಪದ ಇನಾಂ ಹುಲ್ಲಿಕೇರಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಡಜನರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ಸದಾ ನಿರತವಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಚನ್ನಕೇಶವ ಮಾತನಾಡಿ, ಕೆರೆಗಳ ಪುನಶ್ಚೇತನದಿಂದ ರೈತರ ಜಮೀನಿಗಳು ಸಮೃದ್ಧಿ ಆಗಲಿವೆ. ಜತೆಗೆ ಪ್ರಾಣಿ ಸಂಕುಲಕ್ಕೆ ಅನುಕೂಲವಾಗಲಿದೆ. ಸಂಸ್ಥೆಯಿಂದ 6 ಲಕ್ಷ ರೂ. ವೆಚ್ಚದಲ್ಲಿ ಈ ಕೆರೆ ಪುನಶ್ಚೇತನವಾಗಿದೆ. ಗ್ರಾಮಸ್ಥರು ಕೆರೆ ಸಂರಕ್ಷಿಸಿ ಉಳಿಸಿಕೊಳ್ಳಬೇಕೆಂದು ಹೇಳಿದರು.
ನಮ್ಮೂರ ಕೆರೆಗೆ ಪಿಚ್ಚಿಂಗ್ ಹಾಗೂ ಸುತ್ತಲೂ ತಂತಿ ಬೇಲಿ ಮತ್ತಿತರ ಅಭಿವೃದ್ಧಿ ಕಾಮಗಾರಿಗೆ ಒಟ್ಟು 20 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಎಂ.ಜಿ. ಕಿತ್ತಲಿ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಲಮಾಣಿ, ಸದಸ್ಯೆ ಸುವರ್ಣಾ ತೀರ್ಥಪ್ಪನವರ, ಮಂಜುನಾಥ ಮತ್ತಿಕಟ್ಟಿ, ರಾಮನಗೌಡ ಮೂಲಿಮನಿ, ಮುಖಂಡರಾದ ಬಿ. ಕೆ. ಕೋವಳ್ಳಿ, ರಾಚಪ್ಪ ಬನ್ನಿದಿನ್ನಿ, ಕುಮಾರ ಬನ್ನಿದಿನ್ನಿ, ಮಲ್ಲಪ್ಪ ಬೂವನ್ನವರ, ರವಿ ಲಮಾಣಿ, ಎಚ್. ಆರ್. ಕಿತ್ತಲಿ, ಗೌಡಪ್ಪ ಹಿರೇಹಾಳ, ಸಂಸ್ಥೆಯ ಕ್ಷೇತ್ರ ಯೋಜನಾಧಿಕಾರಿ ಮಾಂತೇಶ, ಪಿಡಿಒ ಹಿರೇಗೌಡರ, ಕೆರೂರ ವಲಯದ ಕಂದಾಯ ನಿರೀಕ್ಷ ಆನಂದ ಭಾವಿಮಠ ಇತರರಿದ್ದರು.