

ಹುಣಸೂರು: ಗ್ರಾಮ ಮಟ್ಟದಿಂದಲೇ ಹೋರಾಟಗಳನ್ನು ಆರಂಭಿಸಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದು, ರೈತ ಸಂಘದ ಗ್ರಾಮ ಘಟಕಗಳು ಸದೃಢವಾಗಬೇಕಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಡಗಲಾಪುರ ನಾಗೇಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ಉಂಡುವಾಡಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ರೈತ ಸಮುದಾಯದ ಉಳಿವಿಗಾಗಿ ಸಂಘ 12 ಅಂಶಗಳ ಕಾರ್ಯಯೋಜನೆ ಚಿತ್ರದುರ್ಗದಲ್ಲಿ ನಡೆದ ಪೂರ್ಣ ರಾಜ್ಯ ಸಮಿತಿ ಸಭೆಯಲ್ಲಿ ರೂಪಿಸಿದೆ. ರೈತ ಕುಟುಂಬಕ್ಕೊಬ್ಬ ಸದಸ್ಯ ಊರಿಗೊಬ್ಬ ಕಾರ್ಯಕರ್ತನನ್ನು ತಯಾರು ಮಾಡಲು ತೀರ್ಮಾನಿಸಲಾಗಿದ್ದು, ಇನ್ನು 4 ವರ್ಷಗಳಲ್ಲಿ ರಾಜ್ಯದೆಲ್ಲೆಡೆ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು. ರೈತ ಸಂಘದಲ್ಲಿ ಯುವ ನಾಯಕತ್ವ ರೂಪಿಸಲು ಉದ್ದೇಶಿಸಿದ್ದು, ಪ್ರತಿ ಜಿಲ್ಲೆಯಲ್ಲಿ 100 ಜನ ಯುವಕರಿಗೆ 2 ವರ್ಷ ತರಬೇತು ನೀಡಲು ಕಾರ್ಯಯೋಜನೆ ರೂಪಿಸಿದೆ ಎಂದು ತಿಳಿಸಿದರು.
ತಂಬಾಕು ಸರಾಸರಿ ಬೆಲೆ ಕುಸಿತ: ತಂಬಾಕು ಮಂಡಳಿ ಹರಾಜು ಮಾರುಕಟ್ಟೆಯನ್ನು ಪ್ರಾರಂಭಿಸಿದೆ. ಸರಾಸರಿ ಬೆಲೆಯಲ್ಲಿ ಕಡಿಮೆಯಾಗುತ್ತಿದೆ. ಈ ಸಂಬಂಧ ಸಂಘ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಮಂಡಳಿಗೂ ದರ ಹೆಚ್ಚಿಸಲು ಒತ್ತಾಯಿಸಿದೆ. ದೀಪಾವಳಿ ನಂತರ ಬೆಲೆ ಹೆಚ್ಚಬಹುದು ಎಂಬ ನಿರೀಕ್ಷೆ ಇದೆ. ಬೆಲೆ ಹೆಚ್ಚದಿದ್ದರೆ ಇದರ ವಿರುದ್ಧ ಬೆಳೆಗಾರರನ್ನು ಸಂಘಟಿಸಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಇತ್ತೀಚೆಗೆ ಜಾರಿಗೆ ಬರುತ್ತಿರುವ ನೀತಿಗಳು ರೈತಕುಲವನ್ನು ನಾಶ ಮಾಡುವಂತಾಗಿದೆ. ಹೋರಾಟದ ಜತೆಗೆ ರೈತ ಸಮುದಾಯವೇ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು. ಕರ್ನಾಟಕ ರಾಜ್ಯ ರೈತ ಸಂಘವು ರಾಜ್ಯದ 29 ಜಿಲ್ಲೆಗಳಲ್ಲಿ ಸದೃಢವಾಗಿದೆ, ಯುವಕರು ಮತ್ತು ಮಹಿಳೆಯರು ಚಳವಳಿಯಲ್ಲಿ ಸೇರುತ್ತಿದ್ದಾರೆ. ಇದಕ್ಕೆ ಮೊನ್ನೆ ನಡೆದ ಪೂರ್ಣ ರಾಜ್ಯ ಸಮಿತಿ ಸಾಕ್ಷಿಯಾಗಿದೆ ಎಂದರು.
ತಂಬಾಕು ಬೆಳೆಗಾರರ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಜಿಲ್ಲಾ ಮುಖಂಡ ಪಿ.ಮರಂಕಯ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಸಂಘದ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಮುಂತಾದವರು ಮಾತನಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಶಾಖೆಯ ಅಧ್ಯಕ್ಷರಾಗಿ ಶಿವಕುಮಾರ್, ಗೌರವಾಧ್ಯಕ್ಷರಾಗಿ ಚಲುವನಾಯಕ, ಉಪಾಧ್ಯಕ್ವರಾಗಿ ಜಯರಾಮಾಚಾರಿ, ಗಣೇಶ್, ಕೃಷ್ಣಶೆಟ್ಟಿ, ಕಾರ್ಯದರ್ಶಿಯಾಗಿ ಕೀರ್ತಿಕುಮಾರ್, ಖಜಾಂಚಿಯಾಗಿ ಯು.ಎಂ.ದೇವರಾಜು, ಸಂಘಟನಾ ಕಾರ್ಯದರ್ಶಿಯಾಗಿ ಯು.ಎನ್.ಸುನಿಲ್, ಸಂಚಾಲಕರಾಗಿ ರಾಹುಲ್ ಆಯ್ಕೆಯಾದರು.