ಗ್ರಾಮಾಭಿವೃದ್ಧಿ ಯೋಜನೆ ಬಳಕೆಯಾಗಲಿ

12 gkp.5
Published on

ಗೋಣಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹುದಿಕೇರಿ ಬಾನಂಗಡ ಅರುಣ್ ಸಲಹೆ ನೀಡಿದರು.

ಮಹಿಳಾ ಜ್ಞಾನವಿಕಾಸ ಕೇಂದ್ರ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ಮಂಗಳವಾರ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಮಹಿಳಾ ಸದಸ್ಯರ ಅನುಕೂಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಾಕಷ್ಟು ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀಮದ್‌ಸ್ವಾಮಿ ಧರ್ಮನಾಥನಂದಾ, ಸನಾತನ ಧರ್ಮದಲ್ಲಿ ಋಷಿವರ್ಯರು ಹಲವು ಮೌಲ್ಯಗಳನ್ನು ಬಿಟ್ಟು ಹೋಗಿದ್ದು, ಅದನ್ನು ಇಂದಿಗೂ ಹಲವು ಸಂಸ್ಥೆಗಳು ಪಾಲಿಸುವ ಮೂಲಕ ಜನತೆಗೆ ತಲುಪಿಸುವ ಕೆಲಸ ಮಾಡುತ್ತಿವೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ಗೌರವಿಸುವ ಕೆಲಸ ಕಡಿಮೆಯಾಗುತ್ತಿದೆ. ವಿವಾಹದ ನಂತರ ಪತಿ-ಪತ್ನಿ ಮಾತ್ರ ಜೀವನ ಸಾಗಿಸಲು ಆಲೋಚನೆ ಮಾಡುತ್ತಿದ್ದಾರೆ. ಇದರಿಂದ ಕೂಡು ಕುಟುಂಬ ಮರೆಯಾಗುತ್ತಿದೆ. ಮಕ್ಕಳನ್ನು ಮೊಬೈಲ್‌ನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಮಹಿಳೆಯರೇ ಪ್ರೋತ್ಸಾಹ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಮುಂದೆ ಮಕ್ಕಳ ಮೇಲೆ ದೊಡ್ಡ ದುಷ್ಪರಿಣಾಮ ಬೀರಿದರೂ ಅಚ್ಚರಿ ಇಲ್ಲ ಎಂದರು.

ಪೊನ್ನಂಪೇಟೆ ಸಿಐಟಿ ಕಾಲೇಜಿನ ಉಪನ್ಯಾಸಕಿ ಕು.ಸುಶ್ಮಿತಾ ಮಾತನಾಡಿ, ಈ ಹಿಂದೆ ಕೆಲವು ವರ್ಗದ ಮಹಿಳೆಗೆ ಮಾತ್ರ ಶಿಕ್ಷಣ ಲಭಿಸುತ್ತಿತ್ತು. ಇದೀಗ ಸರ್ವ ಮಹಿಳೆಗೂ ಶಿಕ್ಷಣ ಲಭಿಸುತ್ತಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಜ್ಞಾನ ವಿಕಾಸದ ತಂಡಗಳು ನೃತ್ಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ವಿವಿಧ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಮಹಿಳೆಯರು ತಾವೇ ತಯಾರಿಸಿದ್ದ ಹಲವು ಉತ್ಪನ್ನಗಳನ್ನು ಮಾರಾಟ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅರುವತೋಕ್ಲು ಸರ್ವದೇವತಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕಿ ಶೀಲಾಬೋಪಣ್ಣ ಮಾತನಾಡಿದರು. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ದಯಾಸಾಗರನಂದಾಜೀ, ಯೋಜನಾಧಿಕಾರಿಬಿ.ದಿನೇಶ್, ಪೊನ್ನಂಪೇಟೆ ಮೇಲ್ವಿಚಾರಕ ನರಸಿಂಹಮೂರ್ತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ, ಪೊನ್ನಂಪೇಟೆ ವಲಯದ ಸೇವಾ ಪ್ರತಿನಿಧಿಗ ಳಾದ ರೋಹಿಣಿ, ಗೌರಿ, ಶಾಲಿನಿ, ಚೋಂದು, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net