

ಹಾನಗಲ್ಲ: ಬೆಳೆಯುವವರ ಕಾಲು ಎಳೆಯುವ ಕೆಲಸ ಮಾಡಬೇಡಿ, ವೀರಶೈವ-ಲಿಂಗಾಯತರ 99 ಉಪಪಂಗಡಗಳು ಒಂದಾಗಬೇಕು. ಪರಸ್ಪರ ವೈಮನಸು ಮರೆತು ಸೌಹಾರ್ದಯುತ ಸಂಘಟನೆ ಕಟ್ಟಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.
ಪಟ್ಟಣದ ವಿರಕ್ತಮಠದ ಸದಾಶಿವ ಮಂಗಳ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಿಯಾದಿಯಾಗಿ, ದೇಶ-ವಿದೇಶದವರೂ ನಮ್ಮ ಶರಣರ ವಚನಗಳನ್ನು ಉದಾಹರಿಸಿ ಮಾತನಾಡುತ್ತಿದ್ದಾರೆ. ಆದರೆ, ವೀರಶೈವ -ಲಿಂಗಾಯತರು ಲಿಂಗಪೂಜೆ, ವಿಭೂತಿ ಧಾರಣೆಯಂಥ ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. 120 ವರ್ಷಗಳ ಇತಿಹಾಸವಿರುವ ವೀರಶೈವ ಲಿಂಗಾಯತ ಮಹಾಸಭೆಯ ಚಟುವಟಿಕೆಗಳು ಸಮಾಜದ ಹಿತಕ್ಕಾಗಿ ಇನ್ನಷ್ಟು ಅರ್ಥಪೂರ್ಣವಾಗಿ ಮುನ್ನಡೆಯಬೇಕಾಗಿದೆ. ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಬೇಕಾಗಿದೆ. ನಾವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕಿದೆ. ಜಿಲ್ಲೆಗೊಂದು ಉದ್ಯೋಗ ಮಾರ್ಗದರ್ಶನ ಕೇಂದ್ರಗಳನ್ನು ಆರಂಭಿಸಲಿದ್ದೇವೆ. ಉಪಜಾತಿ ಮರೆತು ವೀರಶೈವ ಲಿಂಗಾಯತರು ಒಂದಾಗಬೇಕು ಎಂದರು.
ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಮೇಧಾವಿಗಳು, ಹೃದಯ ವೈಶಾಲ್ಯತೆಯುಳ್ಳವರು ಇದ್ದಾರೆ. ಆದರೆ, ಅಸಂಘಟನೆಯಿಂದಾಗಿ, ರಾಜಕೀಯ ಐಕ್ಯತೆ ಇಲ್ಲದ ಕಾರಣ ನಮ್ಮವರು ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದಾರೆ. ನಮ್ಮ ಸಮಾಜದ ಮಕ್ಕಳ ಉತ್ತಮ ಭವಿಷ್ಯಕ್ಕೆ ಈಗಲೇ ಆಲೋಚಿಸಬೇಕಾಗಿದೆ. ನಾಳೆಯ ನಮ್ಮ ಪೀಳಿಗೆಗಾಗಿ ಎಲ್ಲರೂ ಒಂದಾಗಬೇಕಿದೆ ಎಂದರು.
ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಾಳೂರು ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯರು, ತಿಳವಳ್ಳಿಯ ನಿರಂಜನ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ, ತಾಲೂಕಾಧ್ಯಕ್ಷ ಶಿವಕುಮಾರ ದೇಶಮುಖ್, ಜಿಲ್ಲಾ ಪ್ರತಿನಿಧಿ ಬಸವರಾಜ ಹಾದಿಮನಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹಾವೇರಿ, ರಾಜ್ಯ ಸದಸ್ಯ ಶಂಭು ಚಕ್ಕಡಿ, ಜಿಲ್ಲಾ ಪ್ರತಿನಿಧಿ ರಾಜೇಶ ಗುಡಿ, ರಾಣೆಬೆನ್ನೂರು ತಾಲೂಕಾಧ್ಯಕ್ಷ ಕೆ.ಎನ್. ಕೋರಧಾನ್ಯಮಠ, ಹಾವೇರಿ ತಾಲೂಕಾಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ಬ್ಯಾಡಗಿ ತಾಲೂಕಾಧ್ಯಕ್ಷ ವಿಶ್ವನಾಥ ಅಂಕಲಕೋಟಿ, ಹಿರೇಕೆರೂರು ತಾಲೂಕಾಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಶಿಗ್ಗಾಂವಿ ತಾಲೂಕಾಧ್ಯಕ್ಷ ಬಸವರಾಜ ರಾಗಿ, ಇತರರು ಉಪಸ್ಥಿತರಿದ್ದರು. ನಾಗರಾಜ ಪಾವಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಯೋಗಪ್ಪ ಮಲ್ಲಿಗಾರ ಹಾಗೂ ಷಣ್ಮುಖಪ್ಪ ಮುಚ್ಚಂಡಿ ಕಾರ್ಯಕ್ರಮ ನಿರ್ವಹಿಸಿದರು.
ೋಟೋ : 24-ಎಚ್‌ಎನ್‌ಎಲ್-1
ಹಾನಗಲ್ಲಿನಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೇವಾ ದೀಕ್ಷಾ ಸಮಾರಂಭವನ್ನು ರಾಜ್ಯಾಧ್ಯಕ್ಷ ಶಂಕರ ಬಿದರಿ ಉದ್ಘಾಟಿಸಿದರು. ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ, ಎಂ.ಎಸ್. ಕೋರಿಶೆಟ್ಟರ, ಶಿವಕುಮಾರ ದೇಶಮುಖ್, ಬಸವರಾಜ ಹಾದಿಮನಿ, ಮಲ್ಲಿಕಾರ್ಜುನ ಹಾವೇರಿ, ಶಂಭು ಚಕ್ಕಡಿ, ರಾಜೇಶ ಗುಡಿ, ಕೆ.ಎನ್. ಕೋರಧಾನ್ಯಮಠ, ಮೃತ್ಯುಂಜಯ ಬುಕ್ಕಶೆಟ್ಟಿ, ವಿಶ್ವನಾಥ ಅಂಕಲಕೋಟಿ, ಶಿವಕುಮಾರ ತಿಪ್ಪಶೆಟ್ಟಿ, ಬಸವರಾಜ ರಾಗಿ, ಇತರರಿದ್ದರು.