

ಶಿರೋಳ: ಬಣಜಿಗ ಸಮಾಜ ಸಹಾಯ, ಸಹಕಾರದ ಮೂಲಕ ಮತ್ತೊಂದು ಸಮಾಜಕ್ಕೆ ಪೂರಕವಾಗಿ ಜೀವನ ನಡೆಸುತ್ತದೆ. ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಿ ಬಸವಣ್ಣನವರು ತತ್ವಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಕರೆ ನೀಡಿದರು.
ಗ್ರಾಮದ ಶ್ರೀ ತೋಂಟದಾರ್ಯ ಮಠದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನರಗುಂದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಿಳಾ ಘಟಕ, ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಾತಿ ತಾರತಮ್ಯ ಮಾಡದೆ, ಬಡವ, ಶ್ರೀಮಂತ ಎನ್ನದೆ ವೀರಶೈವ-ಲಿಂಗಾಯತರು ಒಂದಾಗಬೇಕು ಎಂದು ಸಲಹೆ ನೀಡಿದರು.
ರಾಮದುರ್ಗ ಶಾಸಕ ಅಶೋಕ ಪಟ್ಟಣ ಮಾತನಾಡಿ, ಬಸವೇಶ್ವರರು ಅನುಭವ ಮಂಟಪ ಸ್ಥಾಪನೆ ಮಾಡಿ ಕಲ್ಯಾಣ ರಾಜ್ಯದ ಅಭಿವೃದ್ಧಿ, ಸಮಾಜ ಸುಧಾರಣೆಗೆ ಬಹುಮಖ್ಯ ಪಾತ್ರ ವಹಿಸಿದ್ದಾರೆ. ನಮ್ಮ ಸಮಾಜದ ಹಿರಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡಲು ಪ್ರತಿಭಾ ಪುರಸ್ಕಾರ ಕಾರಣವಾಗಲಿ ಎಂದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಬಣಜಿಗರು ಧರ್ಮನಿಷ್ಠರು, ಪರಧರ್ಮ ಸಹಿಷ್ಣುಗಳು. ವ್ಯಾಪಾರದ ಜತೆಗೆ ಬೇರೆ ಸಮಾಜದವರಿಗೂ ಸಹಾಯ, ಸಹಕಾರ ನೀಡುತ್ತಾರೆ. ಬಣಜಿಗ ಸಮಾಜ ವೀರಶೈವ ಲಿಂಗಾಯತ ಧರ್ಮದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ನರಗುಂದ ಮಾಜಿ ಶಾಸಕ ಬಿ.ಆರ್. ಯಾವಗಲ್, ಕಾಯಕದ ಮಹತ್ವವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದರು. ಗದಗ- ಡಂಬಳ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ, ಶಿರೋಳ- ಬೈರನಹಟ್ಟಿ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶಿರ್ವಚನ ನೀಡಿದರು. ಧಾರವಾಡ ಹೈಕೋರ್ಟ್ ವಕೀಲ ಕೆ.ಎಸ್. ಕೋರಿಶೆಟ್ಟರ ಉಪನ್ಯಾಸ ನೀಡಿದರು. ನರಗುಂದ ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಶಿವಾನಂದ ಶೇಬಣ್ಣವರ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷ ವಿ.ಕೆ. ಮರಿಗುದ್ದಿ ಮಾತನಾಡಿದರು.
ಹಿರಿಯರು, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮ್ಮುಖವನ್ನು ಶಿರೋಳ ಹಿರೇಮಠದ ವೀರಯ್ಯ ಹಿರೇಮಠ, ತಾಲೂಕಿನ ಮಹಿಳಾ ಅಧ್ಯಕ್ಷೆ ಸುಕನ್ಯಾ ಕಾಲಚಟ್ಟಿ, ಗದಗ ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಈಶಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ವಿಶ್ರಾಂತ ನ್ಯಾಯಾಧೀಶ ವಿ.ಎಚ್. ಸಾಂಬ್ರಾಣಿ, ರುದ್ರಪ್ಪ ಪಟ್ಟಣಶೆಟ್ಟಿ, ಪದಾಧಿಕಾರಿಗಳು ಇದ್ದರು. ವಿಶಾಲಾಕ್ಷಿ ಅಂಗಡಿ ಪ್ರಾರ್ಥಿಸಿ, ಬಿ.ಆರ್. ಪಟ್ಟಣಶೆಟ್ಟಿ, ಶಿದ್ದು ಅಂಗಡಿ, ಉಮೇಶ ಮರಿಗುದ್ದಿ, ಪ್ರಶಾಂತ ಶೆಲ್ಲಿಕೇರಿ ನಿರೂಪಿಸಿದರು.