

ಹುಣಸೂರು: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಸಂವಿಧಾನ ವೃತ್ತದಿಂದ ಕಾರ್ಮಿಕ ಕಚೇರಿವರೆಗೆ ಕಾರ್ಮಿಕರು ಘೋಷಣೆ ಕೂಗುತ್ತ ಮೆರವಣಿಗೆ ಸಾಗಿದರು. ಬಳಿಕ ಕಾರ್ಮಿಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಸಿಐಟಿಯು ತಾಲೂಕು ಸಂಚಾಲಕ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿ, ನಿರ್ಮಾಣ ವಲಯ ತೀವ್ರ ಸ್ವರೂಪದಲ್ಲಿ ಬೆಳವಣಿಗೆ ಸಾಧಿಸುತ್ತಿರುವಾಗಲೇ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಜನ ಕಾರ್ಮಿಕರು ಅಪಾಯ ಸನ್ನಿವೇಶ ಹಾಗೂ ಸುರಕ್ಷತೆ ಇಲ್ಲದ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಎನ್‌ಡಿಎ ಸರ್ಕಾರವು 29 ಕಾರ್ಮಿಕ ಕಾನೂನನ್ನು ನಾಲ್ಕು ಸಂಹಿತೆಗಳನ್ನಾಗಿ ಮಾರ್ಪಡಿಸಲು ಹೊರಟಿದೆ. ಇದರಿಂದ 1996 ರಲ್ಲಿ ಜಾರಿಗೊಳಿಸಲಾದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಾಯ್ದೆ ಹಾಗೂ ಸೆಸ್ ಕಾಯ್ದೆ ಮೇಲೆ ಅಪಾಯದ ಕರಿ ನೆರಳು ಬಿದ್ದಿದೆ ಎಂದರು.
ಕಟ್ಟಡ ಕಾರ್ಮಿಕ ಸಂಘದ ಶಿವರಾಮ್ ಮಾತನಾಡಿ, ಕರ್ನಾಟಕದಲ್ಲಿಯೂ ಶೈಕ್ಷಣಿಕ ಧನಸಹಾಯ ಕಡಿತ, ನೋಂದಣಿ, ನವೀಕರಣ ಸಮಸ್ಯೆಗಳು, ಪಿಂಚಣಿ ಇತ್ಯಾದಿಗಳನ್ನು ಬಗೆಹರಿಸಲು ಇತರ ಕಟ್ಟಡ ಕಾರ್ಮಿಕ ಸಂಘಗಳ ಜತೆಗೂಡಿ ನಿರಂತರವಾದ ಹೋರಾಟಗಳನ್ನು ನಡೆಸುತ್ತಿದ್ದರೂ ಕಲ್ಯಾಣ ಮಂಡಳಿ ಹಾಗೂ ಸರ್ಕಾರ ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ತ್ವುರಿತ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬೆಳ್ತೂರು ವೆಂಕಟೇಶ್, ಚೆಲುವರಾಜು, ಚಂದ್ರೇಗೌಡ, ಮಹದೇವ, ವೆಂಕಟೇಶ್ ಬಿಳಿಕೆರೆ, ರೆಡ್ಡಿಕೊಪ್ಪಲು ನಟರಾಜು, ಶ್ರೀನಿವಾಸ, ರವಿನಾಯ್ಕ, ರೇವಣ್ಣನಾಯಕ ಮುಂತಾದವರು ಬಾಗವಹಿಸಿದ್ದರು.