

ರಬಕವಿ/ಬನಹಟ್ಟಿ: ವರ್ತಮಾನದ ಅನುಭವ ಸೃಷ್ಠಿಸುವ ಸಾಹಿತ್ಯ ಎಷ್ಟೇ ಪ್ರಾಚೀನವಾದರೂ ಅದು ಸಮಕಾಲೀನವಾಗುತ್ತದೆ ಎಂದು ಹಿರಿಯ ಸಾಹಿತಿ ಎಂ.ಎನ್. ರಾಮನಾಥ ಹೇಳಿದರು.
ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಸಂಪದ ಬಳಗದಿಂದ ಶನಿವಾರ ಆಯೋಜಿಸಿದ್ದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಅವರ ಚಿಗಳಿ ಹಾಗೂ ತಿರುಗಾಟ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಲಗಬಾಳಿ ಜ್ಞಾನ ಭಂಡಾರ ಹಾಗೂ ಆರೋಗ್ಯಕರ ಸಂವೇಧನೆಗಳೊಂದಿಗೆ ಸಾಹಿತ್ಯದ ಕೃಷಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯದ ಗತಿ ಹಲವು ಆಯಾಮಗಳನ್ನು ಪಡೆದುಕೊಂಡಿದ್ದು, ಮೊಬೈಲ್‌ನಲ್ಲಿ ಮಿಂಚಿನಂತೆ ಸಂಚರಿಸುತ್ತಿದೆ. ಸಾಹಿತ್ಯದ ಬೆಳವಣಿಗೆಗೆ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ ಮಾತನಾಡಿ, ಕಾಲ ಕಾಲಕ್ಕೆ ಸಾಹಿತ್ಯ ಪ್ರಕಾರ ಬದಲಾಗಿರಬಹುದು. ಆಯಾ ಕಾಲದ ಸಂವೇದನೆಗಳನ್ನು ಸೃಜನಶೀಲಗೊಳಿಸುವುದು ಸಾಹಿತಿಯ ಜವಾಬ್ದಾರಿ. ಹುಲಗಬಾಳಿ ಅವರು 74ನೇ ವಯಸ್ಸಿನಲ್ಲಿಯೂ ಸಾಹಿತ್ಯದೊಂದಿಗೆ ಬದುಕು ಸವೆಸುತ್ತ ಗ್ರಂಥ ಲೋಕಾರ್ಪಣೆಗೊಳಿಸಿ ಯುವಕರಿಗೆ ಸ್ಫೂತಿಯಾಗಿದ್ದಾರೆ ಎಂದರು.
ಸಾಹಿತಿ ಡಾ. ಲಲಿತಾ ಹೊಸಪ್ಯಾಟಿ ಹಾಗೂ ಶೀಲಾ ಅರಕಲಗೂಡರು ‘ಚಿಗಳಿ’ ಹಾಗೂ ‘ತಿರುಗಾಟ’ ಗ್ರಂಥ ಲೋಕರ್ಪಾಣೆ ಮಾಡಿದರು.
ನ್ಯಾಯಾಧೀಶ ಜಿ.ಆರ್. ಶೆಟ್ಟರ, ಡಾ. ಎ.ಕೆ. ನಾಡಗೌಡ ಪಾಟೀಲ, ಸಿದ್ಧರಾಜ ಪೂಜಾರಿ, ಐ.ಆರ್. ಮಠಪತಿ, ಜಯವಂತ ಕಾಡದೇವರ, ಪಿ.ಎಂ. ಧೂಪದಾಳ, ಡಾ. ಉಮಾಶೇಖರ ಹಿರೇಮಠ ಮತ್ತಿತರರಿದ್ದರು.