ರಾಸಾಯನಿಕ ಪದಾರ್ಥಗಳ ಬಳಕೆ ನಿಲ್ಲಲಿ

31 hrp02
ಹರಪನಹಳ್ಳಿ ತಾಪಂ ರಾಜೀವ ಗಾಂಧಿ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಇಒ ಚಂದ್ರಶೇಖರ ವೈ. ಎಚ್ ಉದ್ಘಾಟಿಸಿದರು. ಟಿಎಚ್‌ಒ ಪೃಥ್ವಿ ಬಿ, ಮೇಲ್ವಿಚಾರಕಿಯರಾದ ರತ್ನವ್ವ ಬಾರ್ಕಿ, ಜಯಶ್ರೀ, ರತ್ನವ್ವ ದೊಡ್ಡಬೆಣ್ಣಿ, ತಾಲೂಕು ಪೋಷಣ್ ಅಭಿಯಾನ ಸಂಯೋಜಕ ನಿಂಗಪ್ಪ ಆರ್. ಉಮಾ ಜಿ, ಪ್ಯಾನಲ್ ವಕೀಲ ಮೃತ್ಯುಂಜಯ, ವಕೀಲ ಸಿ ನಾಗರಾಜ ನಾಯ್ಕ, ಸಾವಿತ್ರಿ, ವಿಜಯಲಕ್ಷ್ಮೀ, ಜ್ಯೋತಿ ಲಕ್ಷ್ಮೀ ಇತರರಿದ್ದರು.
Published on

ಹರಪನಹಳ್ಳಿ: ಅಪೌಷ್ಟಿಕದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಸದೃಢರನ್ನಾಗಿಸುವ ಪ್ರಯತ್ನ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಸಿಡಿಪಿಒ ಅಶೋಕ ಜಿಟಿ ಹೇಳಿದರು.

ಪಟ್ಟಣದ ತಾಪಂ ರಾಜೀವ ಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಕಾನೂನು ಸೇವಾ ಸಮಿತಿ, ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಆರ್ಥಿಕ, ಸಾಮಾಜಿಕವಾಗಿ ದೇಶ ಎಷ್ಟೇ ಅಭಿವೃದ್ಧಿಯಾಗಿದ್ದರೂ, ದಿನನಿತ್ಯ ಆಹಾರದ ಕೊರತೆಯಿಂದ ಬಳಲುತ್ತಿರುವವರ ಪ್ರಮಾಣ ಕಡಿಮೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಜನರಲ್ಲಿ ಆಹಾರ ಪದ್ಧತಿಯ ಬಗೆಗೆ ಅರಿವಿಲ್ಲದಂತಾಗಿದೆ. ರಾಸಾಯನಿಕ ಪದಾರ್ಥಗಳ ಬಳಕೆಯಿಂದ ತಯಾರಿಸಿದ ಆಹಾರ ಸೇವನೆಯಿಂದ ಅಪೌಷ್ಟಿಕ ಪ್ರಮಾಣ ಏರಿಕೆಯಾಗಿದೆ ಎಂದರು.

ತಾಲೂಕಿನಲ್ಲಿ 130 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರನ್ನು ಸದೃಢರನ್ನಾಗಿಸಲು ಇಲಾಖೆ ವತಿಯಿಂದ ಪೌಷ್ಟಿಕ ವಿಶೇಷ ಕಿಟ್ ವಿತರಿಸಲಾಯಿತು. ಸೆ.1-31 ರವರೆಗೆ ಪೌಷ್ಟಿಕ ಆಹಾರ ಪದ್ಧತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಇಒ ಚಂದ್ರಶೇಖರ ವೈ ಎಚ್ ಮಾತನಾಡಿ, ವೈಜ್ಞಾನಿಕ ಆಹಾರ ಪದ್ಧತಿಗಳಿಂದ ಮಕ್ಕಳು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಆರೋಗ್ಯವಾಗಿ ಇಡಲು ಸಾರ್ವಜನಿಕರು ವಹಿಸಬೇಕಾದ ಕ್ರಮಗಳ ಬಗೆಗೆ ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.

ಆಗಸ್ಟ್ 31-ಹೆಚ್‌ಆರ್‌ಪಿ-02

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net