

ವಿಜಯಪುರ: ಮೈಸೂರು ಸಂಪ್ರದಾಯ ಶೈಲಿಯ ಕುರಿತು ನಡೆದ ಕಾರ್ಯಾಗಾರದಲ್ಲಿ ರಚಿಸಿದ ಕಲಾಕೃತಿಗಳು ಅದ್ಭುತವಾಗಿ ಮೂಡಿಬಂದಿವೆ. ನಶಿಸಿ ಹೋಗುತ್ತಿರುವ ಮೈಸೂರು ಸಾಂಪ್ರದಾಯಿಕ ಶೈಲಿಯನ್ನು ಯುವ ಪೀಳಿಗೆಗೆ ಪರಿಚಯಿಸಿದ್ದು ಉತ್ತಮ ಕಾರ್ಯ ಎಂದು ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ. ಬಿರಾದಾರ ಹೇಳಿದರು.
ನಗರದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ವಿಶೇಷ ಟಕ ಹಾಗೂ ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಮೈಸೂರು ಸಾಂಪ್ರದಾಯಿಕ ಶೈಲಿಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಭಾಗದಲ್ಲಿಯೂ ಕೂಡ ಲಲಿತಕಲಾ ವಿಶ್ವವಿದ್ಯಾಲಯವಾದರೆ ಕಲಾ ಆಸಕ್ತರಿಗೆ ಹೆಚ್ಚಿನ ಅವಕಾಶಗಳು ಸಿಗಲಿದ್ದು, ಇಂತಹ ಕಾರ್ಯಾಗಾರಗಳು ಮೇಲಿಂದ ಮೇಲೆ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಚಾರ್ಯ ಎಸ್.ಟಿ. ಮೇರವಾಡೆ ನಾಲ್ಕು ದಿನಗಳ ಕಾಲ ನಡೆದ ಕಾರ್ಯಗಾರದ ವಿವರಣೆ ನೀಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತು ಕರ್ನಾಟಕದ 50 ಸುವರ್ಣ ರೇಖಾಚಿತ್ರ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಪಿ.ಎಸ್. ಕಡೆಮನಿ, ವಿದ್ಯಾಧರ ಸಾಲಿ, ಎಂ.ಕೆ. ಪತ್ತಾರ, ಪಾಲಿಕೆ ಸದಸ್ಯರಾ ವಿಠಲ ಹೊಸಪೇಟ, ಉದ್ಯಮಿ ನಾಗೇಶ ಶೆಟ್ಟಿ ಮತ್ತಿತರರಿದ್ದರು.
ಅಕಾಡೆಮಿ ಸದಸ್ಯೆ, ಸಂಚಾಲಕಿ ರಾಜೇಶ್ವರಿ ಮೋಪಗಾರ ಸ್ವಾಗತಿಸಿದರು. ಜ್ಯೋತಿ ಕದಂ ನಿರೂಪಿಸಿದರು. ಅಕಾಡೆಮಿ ನಿಕಟಪೂರ್ವ ಸದಸ್ಯ ರಮೇಶ ಚವಾಣ ವಂದಿಸಿದರು.