

ಮೈಸೂರು: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಬೋಧನೆಯೊಂದಿಗೆ ಅತ್ಯಾಧುನಿಕ ಸಂಶೋಧನೆಯಲ್ಲೂ ತೊಡಗಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಮಾಜಿ ಅಧ್ಯಕ್ಷ, ಇಸ್ರೋ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನಲ್ಲಿ ಆಯೋಜಿಸಿದ್ದ 9ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯಗಳು ತಮ್ಮ ಸಂಶೋಧಕರಿಗೆ ಪ್ರಯೋಗ ಮಾಡಲು, ಯಶಸ್ವಿಯಾಗಲು ಮತ್ತು ಕೆಲವೊಮ್ಮೆ ವಿಫಲಗೊಳ್ಳಲು ಸ್ವಾತಂತ್ರ್ಯ ನೀಡಬೇಕು. ಸಂಶೋಧಕರು ದೊಡ್ಡ ತಪ್ಪುಗಳನ್ನು ಮತ್ತು ದೊಡ್ಡ ಸಂಶೋಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಒಂದು ತಪ್ಪು ದೊಡ್ಡ ಆವಿಷ್ಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.
ವಿವಿ ಅಂತರಶಿಸ್ತೀಯ ಸಂಶೋಧನೆ ಮತ್ತು ಬೋಧನೆಗೆ ಪ್ರೋತ್ಸಾಹ ನೀಡಬೇಕು. ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಖಾಸಗಿ ವಲಯದೊಂದಿಗೆ ಸೇರಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಬಹುಶಿಸ್ತೀಯ ಸಂಶೋಧನೆಗಳಿಗೆ ಮಾರ್ಗದರ್ಶನ ಮತ್ತು ಬೆಂಬಲದ ಅಗತ್ಯ ಇದೆ. ಇದು ಶೈಕ್ಷಣಿಕ ತಂತ್ರಜ್ಞಾನ ಸೇರಿದಂತೆ ಕಲೆ, ಮಾನವಿಕ, ಸಮಾಜ ವಿಜ್ಞಾನ, ನೈಸರ್ಗಿಕ ವಿಜ್ಞಾನ, ಗಣಿತ, ಇಂಜಿನಿಯರಿಂಗ್, ತಂತಜ್ಞಾನದಲ್ಲೂ ಜಾರಿಗೆ ಬರಬೇಕು ಎಂದರು.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಮತ್ತು ನೈತಿಕತೆ ಬೇರೂರಿದೆ. ಕಳೆದ ಶಿಕ್ಷಣ ನೀತಿಯ ನಂತರದ 36 ವರ್ಷಗಳಲ್ಲಿ ಭಾರತ ಮತ್ತು ಪ್ರಪಂಚದ ಸಾಮಾಜಿಕ, ರಾಜಕೀಯ, ಆರ್ಥಿಕ ವಾತಾವರಣವು ಗಮನಾರ್ಹವಾಗಿ ಬದಲಾಗಿದೆ. ಆರ್ಥಿಕತೆಯು ತೆರೆದುಕೊಂಡಿದೆ. ಸಾಮಾಜಿಕ ರಚನೆಗಳು ಬದಲಾವಣೆಗಳಿಗೆ ಒಳಗಾಗಿವೆ. ಅದಕ್ಕೆ ತಕ್ಕಂತೆ ಹೊಸದಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದರು.
434 ಸ್ನಾತಕ, 206 ಸ್ನಾತಕೋತ್ತರ ಸೇರಿದಂತೆ 640 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 47 ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕಾಲೇಜಿನ ಆಡಳಿತಾಧಿಕಾರಿಯೂ ಆದ ಮೈಸೂರು ಧರ್ಮಪ್ರಾಂತ್ಯದ ಗುರುಗಳಾದ ಡಾ.ಬರ್ನಾಡ್ ಮೊರಾಸ್, ಗುರುಗಳಾದ ಫಾ.ಆಲ್ಫ್ರೆಡ್ ಜಾನ್ ಮೆನ್ಡೋನ್ಸ್, ಕಾರ್ಯದರ್ಶಿ ರೆ.ಫಾ. ವಿಜಯಕುಮಾರ್, ಕೋಶಾಧಿಕಾರಿ ರೆ.ಫಾ.ಮದಲೈ ಮುತ್ತು, ನಿರ್ದೇಶಕ ರೆ.ಡಾ.ಬರ್ನಾಡ್ ಪ್ರಕಾಶ್ ಬಾರ್ನಿಸ್, ಪ್ರಾಂಶುಪಾಲ ಡಾ.ರವಿ.ಜೆ.ಡಿ.ಸಲ್ಡಾನ್ಹಾ ಇತರರು ಇದ್ದರು.