ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿ

12 SDP 2
Published on

ಸಿದ್ದಾಪುರ: ಸಂವಿಧಾನ ಅಂಗೀಕಾರವಾದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಸಾಕಷ್ಟು ಅಂತರವಿದೆ. ದೇಶದ ಜನತೆಯಲ್ಲಿ ಸಮಾನತೆ ಭದ್ರತೆ ಭಾವನೆ ಬರಬೇಕಾಗಿದೆ. ಎಲ್ಲ ಧರ್ಮದವರನ್ನೂ ಜೋಡಿಸಿ ರಾಷ್ಟ್ರೀಯತೆಯನ್ನು ಮೂಡಿಸಬೇಕಾಗಿದೆ ಇಂತಹ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅವಶ್ಯಕವಾಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಸ್ಥಳೀಯ ಧರ್ಮಶ್ರೀ ಫೌಂಡೇಶನ್ ಹಾಗೂ ಶಿರಸಿಯ ದೀನದಯಾಳ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ವಿಚಾರ- ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕ ಸಂಹಿತೆ ಕುರಿತು ಉಪನ್ಯಾಸ ನೀಡಿದ ಧಾರವಾಡ ಹೈಕೋರ್ಟ್ ನ್ಯಾಯವಾದಿ ಅನೂಪ ದೇಶಪಾಂಡೆ, ಈಗಾಗಲೇ ನಮ್ಮ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಆದರೆ, ಕೆಲವೊಂದು ವಿಷಯದಲ್ಲಿ ಬೇರೆ ಬೇರೆ ಧರ್ಮದವರಿಗೆ ಬೇರೆ ಕಾನೂನು ಇದೆ. ಕೌಟಂಬಿಕ ಕಾಯ್ದೆ, ವಿಚ್ಛೇದನ ಕಾಯ್ದೆ, ದತ್ತು ಸ್ವೀಕಾರ ಕಾಯ್ದೆಯಲ್ಲಿ ವ್ಯತ್ಯಾಸವಿದೆ. ಇದರಿಂದ ಕೆಲವು ಧರ್ಮದ ಮಹಿಳೆಯರಿಗೆ, ಮಕ್ಕಳಿಗೆ ಅನ್ಯಾಯವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಮಹಿಳೆಯರ, ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸೂಚಿಸಲಾಗಿದೆ. ಇದರ ಅನುಷ್ಠಾನ ಮಾಡುವುದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಶ್ರೀ ಫೌಂಡೇಶನ್ ಕಾರ್ಯಾಧ್ಯಕ್ಷ ಡಾ. ರವಿ ಹೆಗಡೆ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಂ. ಪಾಟೀಲ, ನಿವೃತ ಸೈನಿಕ ರಾಜೇಶ ನಾಯ್ಕ ಉಪಸ್ಥಿತರಿದ್ದರು. ಧರ್ಮಶ್ರೀ ಫೌಂಡೇಶನ್ ಕಾರ್ಯದರ್ಶಿ ಶಾಮಲಾ ಹೆಗಡೆ ಸ್ವಾಗತಿಸಿದರು. ಎಂ.ಆರ್. ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net