ಸತ್ಯಾಂಶದ ಸುದ್ದಿ ಬರೆಯುವ ಪ್ರವೃತ್ತಿ ಹೆಚ್ಚಲಿ

MUL-1
ಮುಳಗುಂದ ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು
Published on

ಮುಳಗುಂದ: ಇಂದಿನ ದಿನಗಳಲ್ಲಿ ಪತ್ರಿಕೆಗಳು ಸ್ವತಂತ್ರವಾಗಿರದೇ ಮಾಲೀಕರ ಸ್ವತ್ತಾಗುತ್ತಿವೆ. ಪತ್ರಕರ್ತರು ಅವರ ಅಡಿಯಾಳಾಗಿ ಕೆಲಸ ಮಾಡುವಂತಾಗಿದೆ ಎಂದು ಎಂದು ಕಾನೂನು ಮತ್ತು ಸಂಸದಿಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮುಳಗುಂದ ಘಟಕದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪತ್ರಕರ್ತರು ಸತ್ಯಕ್ಕೆ ಸಮೀಪವಾದ ಸುದ್ದಿಗಳನ್ನು ಬರೆಯುತ್ತಿದ್ದು, ಅದು ನಮಗೆಲ್ಲ ಹೆಮ್ಮೆ. ಸತ್ಯ ಸಂಗತಿಗಳನ್ನು ಬರೆಯುವ ಪ್ರವೃತ್ತಿ ಹೆಚ್ಚಾಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯಾವುದೇ ಸರ್ಕಾರದ ಅಳಿವು- ಉಳಿವು ಪತ್ರಕರ್ತರ ಮೇಲಿದೆ. ಗಟ್ಟಿತನದ ಸುದ್ದಿಯನ್ನು ಪ್ರಕಟಿಸುವಲ್ಲಿ ಪತ್ರಿಕಾರಂಗ ಹೆಸರಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಸರ್ಕಾರದ ತಪ್ಪಗಳನ್ನು ಪ್ರಶ್ನಿಸುವಲ್ಲಿ ಪತ್ರಿಕಾರಂಗ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರು.

ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಉಪನ್ಯಾಸ ನೀಡಿದರು. ಪಿಯುಸಿಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ಅಂದಾನಮ್ಮ ಬಳ್ಳಾರಿ, ರಾಷ್ಟ್ರೀಯ ಯೋಗಪಟು ನಮಿತಾ ಗುರಮ್ಮನವರ, ರಾಷ್ಟ್ರೀಯ ಕಬ್ಬಡ್ಡಿ ಪಟು ಗಂಗವ್ವ ಅವ್ವಣ್ಣವರ, ಪೋಲಿಸ್ ಇಲಾಖೆಯ ಬಸವರಾಜ ಕೋಳಿವಾಡ, ಶಿಕ್ಷಕರಾದ ಪಿ.ಬಿ. ಕೆಂಚನಗೌಡರ, ಪೌರಕಾರ್ಮಿಕ ಬಸಪ್ಪ ಚಲವಾದಿ, ಶಿಕ್ಷಕರಾದ ಎಸ್.ಎಂ. ನವಲಿ, ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net