ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮುಂದುವರಿಯಲಿ

3
Published on

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮುಂದುವರಿಯಲಿ ಎಂದು ಆಗ್ರಹಿಸಿ ಗಂಧದಗುಡಿ ಫೌಂಡೇಷನ್ ನೇತೃತ್ವದಲ್ಲಿ ಪರಿಸರ ಪ್ರೇಮಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಡು ಇರುವುದು ವನ್ಯಜೀವಿಗಾಗಿ, ನಿಮ್ಮ ವಾಹನ ಸಂಚಾರಕ್ಕಾಗಿ ಅಲ್ಲ, ಮನುಷ್ಯರಿಗೆ ರಾತ್ರಿ ವೇಳೆ ಹೇಗೆ ನೆಮ್ಮದಿ ಬೇಕೋ , ಅದೇ ರೀತಿ ಕಾಡುಪ್ರಾಣಿಗಳಿಗೂ ರಾತ್ರಿ ಹೊತ್ತು ನೆಮ್ಮದಿ ಬೇಕು. ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮುಂದುವರಿಯಲಿ ಎಂಬಿತ್ಯಾದಿ ಘೋಷಣೆಗಳನ್ನು ಬರೆದ ಫಲಕಗಳನ್ನು ಪ್ರದರ್ಶಿಸಿ ಬಂಡೀಪುರ ಅರಣ್ಯ ಉಳಿವಿಗೆ ಆಗ್ರಹಿಸಿದರು.

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದರಿಂದ ವನ್ಯಜೀವಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಒಂದೊಮ್ಮೆ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ಹೆಚ್ಚಿನ ಅಪಘಾತ ಸಂಭವಿಸಿ ಕಾಡು ಪ್ರಾಣಿಗಳು ಸಾವಿಗೀಡಾಗಲಿವೆ. ಆದ್ದರಿಂದ ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪರಿಸರ ಪ್ರೇಮಿಗಳಾದ ಭಾನುಮೋಹನ್, ಜಯಕೀರ್ತಿ, ಗಂಧದಗುಡಿ ಫೌಂಡೇಷನ್‌ನ ಪದಾಧಿಕಾರಿಗಳಾದ ಚೇತನ್, ರವಿ ಕೀರ್ತಿಗೌಡ, ಲಕ್ಷ್ಮಿನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net