

ಸೋಮವಾರಪೇಟೆ: ತಾಲೂಕಿನ ಸಿ ಆ್ಯಂಡ್ ಡಿ ಜಾಗಕ್ಕೆ ಹಕ್ಕುಪತ್ರ ನೀಡುವುದರ ಜತೆಗೆ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ಹೋರಾಟ ಸಮಿತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಿಗೆ ಸಿ ಆ್ಯಂಡ್ ಡಿ ಸಮಸ್ಯೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಪ್ರಮುಖರು ಹೇಳಿದರು.
ಜಿಲ್ಲೆಯಲ್ಲಿ ಕೂರ್ಗ್ ಲ್ಯಾಂಡ್ ರೆಜ್ಯುಲೇಷನ್ 1889 ರ ಕಾಯ್ದೆ ಪೂರ್ವದಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ನಿಭಂದನೆಗಳನ್ನೊಳಗೊಂಡಂತೆ ರೈತರಿಗೆ ಹಿಡುವಳಿ ಜಮೀನನ್ನು ನೀಡಲಾಗಿದೆ. ನಂತರ ಜನಸಂಖ್ಯೆ ಬೆಳೆದಂತೆ ರೈತರು ಪೈಸಾರಿ ಜಮೀನನ್ನು ಭೂ ಮಂಜೂರಾತಿ ಕಾಯ್ದೆಯಡಿ ಮಂಜೂರಾತಿ ಮಾಡಿಸಿಕೊಂಡಿದ್ದು, ಇನ್ನೂ ಮಂಜೂರಾತಿಗೆ ಅನೇಕ ಅರ್ಜಿಗಳು ಬಾಕಿ ಇವೆ. ಅಂತಹ ಭೂಮಿಯನ್ನು ಈಗ ಸಿ ಆ್ಯಂಡ್ ಡಿ ಭೂಮಿ ಎಂದು ಅರಣ್ಯ ಭೂಮಿಯನ್ನಾಗಿ ಪರಿವರ್ತನೆ ಮಾಡಲು ಸಿದ್ಧತೆ ನಡೆಯಯುತ್ತಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ರೈತರನ್ನು ರಕ್ಷಣೆ ಮಾಡಬೇಕು ಎಂದು ರೈತ ಪ್ರಮುಖರು ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಕರ್ನಾಟಕ ಸಂಕಷ್ಟಕ್ಕೆ ಸಿಲುಕಲಿದೆ. ಕರ್ನಾಟಕದ 1553 ಗ್ರಾಮಗಳು ಕೊಡಗಿನ ಮೂಲ ನಿವಾಸಿಗಳು, ರೈತರು, ಕಾಫಿ ಬೆಳೆಗಾರರು, ಅನಾದಿ ಕಾಲದಿಂದ ಉಳಿಸಿ, ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ, ಗ್ರಾಮೀಣ ಬದುಕು ಕಣ್ಮರೆಯಾಗಲಿದೆ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಹೇಳಿದರು.
ಯಾವುದೇ ಮಾಹಿತಿ ನೀಡದೆ, ಜಂಟಿ ಸರ್ವೇ ನಡೆಸದೆ ಏಕಪಕ್ಷೀಯ ವರದಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೋರಾಟ ಸಮಿತಿ ಸಂಚಾಲಕ ಕೆ.ಬಿ.ಸುರೇಶ್ ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಈ ಸಂಬಂಧ ಸುಪ್ರಿಂ ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದು, ಈ ಬಗ್ಗೆ ಮುಖ್ಯಮಂತ್ರಿ, ಅರಣ್ಯ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಬಿ.ಜೆ.ದೀಪಕ್, ಎಸ್.ಜಿ.ಮೇದಪ್ಪ, ಎ.ಆರ್.ಮುತ್ತಣ್ಣ, ಕೆ.ಎಂ.ಲೋಕೇಶ್, ಹೂವಯ್ಯ, ಎಚ್.ಈ. ರಮೇಶ್, ರಾಜಪ್ಪ ಮತ್ತಿತ್ತರರು ಇದ್ದರು.