

ಮೈಸೂರು: ತ್ರಿಮತಸ್ತ ಬ್ರಾಹ್ಮಣರು ಒಂದಾಗಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಬೆಂಗಳೂರಿನಲ್ಲಿ ಜನವರಿಯಲ್ಲಿ ಆಯೋಜಿಸಿರುವ 11ನೇ ರಾಜ್ಯ ಮಟ್ಟದ ವಿಪ್ರ ಸಮ್ಮೇಳನ, ಸುವರ್ಣ ಸಂಭ್ರಮ ಅಂಗವಾಗಿ ನಗರದಲ್ಲಿ ಸೋಮವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮಾಜದ ರಕ್ಷಣೆ ಮತ್ತು ಸಮುದಾಯದ ಸಂಘಟನೆಗಾಗಿ ತ್ರಿಮತಸ್ಥ ವಿಪ್ರರು ಒಗ್ಗಟ್ಟಿನ ಪ್ರದರ್ಶನ ಅವಶ್ಯಕವಿದೆ. ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಿಪ್ರ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ವಿಪ್ರರು ಸೇರಲಿದ್ದಾರೆ ಎಂದು ಹೇಳಿದರು.
ವಿವಿಧ ಗೋಷ್ಠಿಗಳನ್ನು ಆಯೋಜಿಸಿದ್ದು, ಸಾಕಷ್ಟು ಚರ್ಚೆಗಳು ನಡೆಯಲಿವೆ. ಅವುಗಳನ್ನು ನಿರ್ಣಯಿಸಿ ಸರ್ಕಾರದ ಗಮನಕ್ಕೆ ತರಲಾಗುವುದು. ವಿಧಾನಸೌಧಕ್ಕೆ ವಿಪ್ರರ ಕೂಗು ತಲುಪಲಿದೆ, ಮಠಾಧಿಪತಿಗಳು ಮಂತ್ರಿಗಳು ಜನಪ್ರತಿನಿಧಿಗಳು ಉದ್ಯಮಿಗಳು ಕಲಾವಿದರು ಸಹ ಮೆರುಗು ನೀಡಲು ಭಾಗವಹಿಸಲಿದ್ದಾರೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ವಿಪ್ರ ಸಮುದಾಯದ ಸಂಘಟನೆಯ ವಿವಿಧ ಕ್ಷೇತ್ರದ ಪ್ರತಿಭೆಗಳನ್ನ ಗುರುತಿಸಲಾಗುವುದು. ರಾಜ್ಯ ಸರ್ಕಾರದಿಂದ ಬ್ರಾಹ್ಮಣ ಸಮುದಾಯಕ್ಕೆ ಸವಲತ್ತು ಆಗ್ರಹಿಸಿ ಸಮಾವೇಶದ ಮೂಲಕ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಬೆಂಗಳೂರಿನ ವಿಪ್ರ ಸಮಾವೇಶಕ್ಕೆ ಮೈಸೂರಿನಿಂದ 5 ಸಾವಿರ ವಿಪ್ರರು ಭಾಗವಹಿಸುವ ನಿರೀಕ್ಷೆಯಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಸರ್ಕಾರಿ ಸವಲತ್ತು ಕೊಡಿಸಲು ಕೇಂದ್ರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗುವುದು. ಶಿಕ್ಷಣ ಉದ್ಯೋಗ ಅರೋಗ್ಯ ಸಹಕಾರಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವ ಪೀಳಿಗೆಯನ್ನು ಕರೆ ತರಲು ಸಮಾವೇಶ ಆಯೋಸಲಾಗಿದೆ ಎಂದರು.
ಧಾರ್ಮಿಕ ಮುಖಂಡ ಭಾನುಪ್ರಕಾಶ್ ಶರ್ಮ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರಿ, ನಗರಪಾಲಿಕೆ ಮಾಜಿ ಸದಸ್ಯರಾದ ಸೌಭಾಗ್ಯ ಮೂರ್ತಿ, ಎಂ.ಡಿ.ಪಾರ್ಥಸಾರಥಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಮುಖಂಡರಾದ ಮೈ.ವಿ.ರವಿಶಂಕರ್, ಪುಷ್ಪಾ ಅಯ್ಯಂಗಾರ್, ಎಂ.ಆರ್.ಬಾಲಕೃಷ್ಣ, ರಾಕೇಶ್ ಭಟ್, ಕೆ.ಎಂ.ನಿಶಾಂತ್, ಎಂ.ಆರ್.ಬಾಲಕೃಷ್ಣ, ಕಡಕೋಳ ಜಗದೀಶ್, ಮಂಜು ಸಿ.ಶಂಕರ್, ಸುಚೇಂದ್ರ, ಜಯಸಿಂಹ, ಚಕ್ರಪಾ ಇತರರು ಇದ್ದರು.