

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಆಧುನಿಕ ಭರಟೆಯಲ್ಲಿ ಮೊಬೈಲ್ಗಳಿಗೆ ಸೀಮಿತವಾಗಿರುವ ಮಕ್ಕಳಿಗೆ ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ರಂಗಾಯಣ ಮಾಡುವ ಮೂಲಕ ಮುಂದಿನ ಪೀಳಿಗೆಗೂ ರಂಗಭೂಮಿ ಚಟುವಟಿಕೆ ವಿಸ್ತರಿಸಬೇಕು ಎಂದು ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಹೇಳಿದರು.
ನಗರದ ಪಂ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ-2024 ಸಾಂಸ್ಕೃತಿಕ ಏಕತಾ ದಿನ ನಿಮಿತ್ತ ಏರ್ಪಡಿಸಿದ್ದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ಗಳಲ್ಲಿ ರೀಲ್ಸ್ ವೀಕ್ಷಣೆ ಹಾಗೂ ಆಟವಾಡುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅಂತಹ ಮಕ್ಕಳಿಗೆ ನಾಟಕಗಳನ್ನು ತೋರಿಸುವ ಮೂಲಕ ಅವರಲ್ಲಿನ ಕಲೆ ಗುರುತಿಸುವ ಕಾರ್ಯ ಮಾಡಬೇಕು. ಜನರಿಗೆ ಸಾಮಾಜಿಕ, ರಾಜಕೀಯ ಸೇರಿ ಪ್ರಚಲಿತ ವಿಷಯಗಳ ಕುರಿತು ಅರಿವು ಮೂಡಿಸುವ ಉತ್ತಮ ಸಂದೇಶಗಳನ್ನು ಹೊಂದಿರುವ ನಾಟಕಗಳನ್ನು ರಂಗಾಯಣ ಯಶಸ್ವಿಯಾಗಿ ಮಾಡುತ್ತಿದೆ. ಪ್ರಚಾರ ಕಡಿಮೆ ಇದ್ದರೂ ರಂಗಾಯಣಗಳು ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ರಂಗಭೂಮಿಯನ್ನು ಬೆಳೆಸಿಕೊಂಡು ಬರುತ್ತಿದೆ ಎಂದರು.
ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದ ಸದಾಶಿವ ಜನಗೌಡರ ಉಪಸ್ಥಿತರಿದ್ದರು. ಶಶಿಕಲಾ ಹುಡೇದ ಸ್ವಾಗತಿಸಿದರು. ಸ್ಮಿತಾ ಅಂಗಡಿ ನಿರೂಪಿಸಿದರು.
ನಂತರ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ ಮೋಳಿಗೆ ಮಾರಯ್ಯ ನಾಟಕವನ್ನು ಸಿರಿಗೇರಿ ಧಾತ್ರಿ ರಂಗ ಸಂಸ್ಥೆ ತಂಡ ಪ್ರಸ್ತುತಪಡಿಸಿತು.