

ಮಳವಳ್ಳಿ: ರಂಗಭೂಮಿ ಕಲೆಗೆ ಗ್ರಾಮೀಣ ಭಾಗದ ಜನರಲ್ಲಿ ಹೆಚ್ಚಿನ ಸಂಖ್ಯೆಯ ಪ್ರೋತ್ಸಾಹ ಸಿಗುವಂತಾದರೆ ಮಾತ್ರ ನಮ್ಮ ಸಾಂಸ್ಕೃತಿಕ ಸೊಗಡಿನ ಕಲೆಗಳು ಉಳಿಯಲು ಸಾಧ್ಯ ಎಂದು ನಟ ಅರುಣ್ ಸಾಗರ್ ತಿಳಿಸಿದರು.
ರಂಗಬಂಡಿ ಮಳವಳ್ಳಿ ವತಿಯಿಂದ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೊಗದೊಂದಿಗೆ ಕಳೆದ ಏಳು ದಿನಗಳಿಂದ ಪುಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ಹಮ್ಮಿಕೊಂಡಿದ್ದ ನಾಟಕೋತ್ಸವ ಸೋಮವಾರ ತೆರೆಕಂಡ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳ ಯುವ ಪೀಳಿಗೆಯು ಮೊಬೈಲ್ ಗೀಳು ಅಂಟಿಸಿಕೊಂಡು ಸಂಬಂಧಗಳನ್ನೇ ಕಡೆಗಣಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯ ಅವನತಿಗೆ ಕಾರಣವಾಗಲಿದೆ. ಅಲ್ಲದೆ ಸಮಾಜಕ್ಕೆ ಮಾರಕವಾಗುವ ಸಾಧ್ಯತೆ ಇರುವುದರಿಂದ ಮೊಬೈಲ್ ಚಾಳಿಯಿಂದ ಹೊರಬರಬೇಕು. ಜತೆಗೆ ಇದರಿಂದ ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿವಿಗೂ ಸಹಕಾರಿಯಾಗಲಿದೆ ಎಂದರು.
ಯುವಪೀಳಿಗೆಯು ರಂಗಭೂಮಿ ಕಲೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿಕೊಂಡರೆ ರಂಗಕಲೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಸಲಹೆ ನೀಡಿದರು.
ರಂಗಭೂಮಿ ಕಲೆಯು ನಟನೆ, ಸಂವಹನ, ಸಂಗೀತ, ನೃತ್ಯ, ಮತ್ತು ದೃಶ್ಯಗಳ ಮೂಲಕ ಪ್ರೇಕ್ಷಕರ ಮುಂದೆ ಕಥೆಗಳನ್ನು ಹೇಳುವ ಒಂದು ಪ್ರದರ್ಶನ ಕಲೆಯಾಗಿದೆ. ರಂಗಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮೇರು ಪ್ರತಿಭೆ ನಮ್ಮ ಮಳವಳ್ಳಿ ಸುಂದರಮ್ಮ. ಅವರು ರಂಗಭೂಮಿ ಕಲೆಗಾಗಿ ಮನೆಯನ್ನು ತೊರೆದು ರಂಗಭೂಮಿಯಲ್ಲಿ ತೊಡಗಿಸಿಕೊಂಡು ಅಸಾಧಾರಣ ಪ್ರತಿಮೆಯಾಗಿ ಮೆರೆದು ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು.
ಇಂತಹ ಮಹಾನ್ ರಂಗಭೂಮಿ ಕಲಾವಿದೆಯ ತವರೂರಿನಲ್ಲಿ ಅವರ ಹೆಸರಿನಲ್ಲಿ ಆಯೋಜಿಸಿದ್ದ ನಾಟಕೋತ್ಸವವು ಏಳು ದಿನಗಳು ಯಶಸ್ವಿಯಾಗಿ ಜರುಗಿದೆ. ರಂಗಕಲೆ ಉಳಿವಿಗೆ ಶ್ರಮಿಸಿದ ತಂಡಕ್ಕೆ ಇದರಿಂದ ಬಹುದೊಡ್ಡ ಯಶಸ್ಸು ಸಕ್ಕಿಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾಟಕೋತ್ಸವದ ಕೊನೇ ದಿನ ಡಾ.ಬಿ.ವಿ.ರಾಜಾರಾಂ ನಿರ್ದೇಶನದ ಮುಖ್ಯಮಂತ್ರಿ ಚಂದ್ರು ಮುಖ್ಯ ಪಾತ್ರದಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನಗೊಂಡಿತು. ಭವನದ ಆಸನಗಳು ಭರ್ತಿಯಾಗುವುದರ ಜತೆಗೆ ಅಕ್ಕಪಕ್ಕದಲ್ಲಿ ನಿಂತು ಪ್ರೇಕ್ಷಕರು ನಾಟಕ ವೀಕ್ಷಿಸಿದರು. ಈ ಸಂದರ್ಭದಲ್ಲಿ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್, ವಿಶ್ವಮಾನವ ವಿಚಾರ ವೇದಿಕೆ ಕಾರ್ಯದರ್ಶಿ ಭರತ್ ರಾಜ್, ಯೂನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಪ್ರಕಾಶ್, ರಂಗಬಂಡಿ ಮಳವಳ್ಳಿ ಅಧ್ಯಕ್ಷ ಮಧು ಇತರರು ಇದ್ದರು.