ಶಿಕ್ಷಕರು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಲಿ

19 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೌಢಶಾಲಾ ಶಿಕ್ಷಕರು ಸಾಕಷ್ಟು ಕ್ರಿಯಾಶೀಲರಾಗಿದ್ದು, ಸಾಮಾಜಿಕ ಜಾಲತಾಣಗಳಾದ ವಾಟ್ಸ್​ಅಪ್​ ಗುಂಪಿನಲ್ಲಿ ಗಣಿತದ ಸಮಸ್ಯೆ ಬಿಡಿಸಿ ಎಲ್ಲ ಶಿಕ್ಷಕರಿಗೂ ಉಪಯೋಗವಾಗುವಂತೆ ಮಾಡುತ್ತಿರುವುದು ಶ್ಲಾನೀಯ ಎಂದು ವಿಶ್ರಾಂತ ಕುಲಪತಿ ಪ್ರೊ. ಎಚ್​.ಬಿ. ವಾಲೀಕಾರ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಗಣಿತ ಶಿಕ್ಷಕರಿಗೆ ವಿಜ್ಞಾನ ಕೇಂದ್ರದಲ್ಲಿ 2 ದಿನಗಳ ಕಾಲ ಏರ್ಪಡಿಸಿರುವ ಮಾದರಿ ತಯಾರಿಕೆ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳ ಪ್ರಾಧ್ಯಾಪಕರು ಸಹ ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬಹುದು. ಶಿಕ್ಷಕರ ಸ್ಥಾನ ಕೇವಲ ಬೋಧಿಸುವುದಷ್ಟೇ ಅಲ್ಲದೆ, ಜವಾಬ್ದಾರಿಯುತ ಸ್ಥಾನವಾಗಿದೆ. ಶಿಕ್ಷಕರು ಅದನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದರು.
ಪ್ರೊ. ಎಸ್​.ಸಿ. ಶಿರಾಳಶೆಟ್ಟಿ ಮಾತನಾಡಿ, ಗಣಿತದ ಬೋಧನೆ ಸೈದ್ಧಾಂತಿಕ ಅಲ್ಲದೆ, ಗಣಿತ ಪ್ರಯೋಗಾಲಯ ಸ್ಥಾಪಿಸಿ ಮಾದರಿಗಳ ಮೂಲಕ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಶಿಕ್ಷಕರು ಇಂತಹ ತರಬೇತಿ ಪಡೆದು, ಪರಿಶ್ರಮದಿಂದ ಪಠ್ಯಗಳನ್ನು ಮಾದರಿಗಳಾಗಿ ರೂಪಿಸಿ ಪ್ರಯೋಗಾಲಯಗಳನ್ನು ಮಾಡಿಕೊಳ್ಳಬೇಕು. ಈ ಮೂಲಕ ಉತ್ತಮವಾಗಿ ಬೋಧಿಸಿದರೆ ಭವಿಷ್ಯದಲ್ಲಿ ಉತಷ್ಟ ವಿಜ್ಞಾನಿಗಳು, ಇಂಜಿನಿಯರ್​ಗಳು, ಗಣಿತ ತಜ್ಞರು ಹಾಗೂ ಸಂಶೋಧಕರನ್ನು ಹುಟ್ಟುಹಾಕಬಹುದು ಎಂದರು.
ಡಾ. ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ. ಪ್ರಸನ್ನಮೂರ್ತಿ, ಎಂ.ಎ. ಭಾವಿಕಟ್ಟಿ, ರಾಜೀವ ಪಿ.ಜಿ., ಯಲ್ಲಪ್ಪ ಹುಬ್ಬಳ್ಳಿ, ಗಣಿತ ವಿಷಯ ಪರಿವೀಕ್ಷಕರು, ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಗಣಿತ ಶಿಕ್ಷಕರು ಹಾಗೂ ವಿಜ್ಞಾನ ಕೇಂದ್ರದ ಸಿಬ್ಬಂದಿ, ಇತರರು ಇದ್ದರು.
ವಿಶಾಲಾ ಎಸ್​.ಜೆ. ನಿರೂಪಿಸಿದರು. ಚಂದ್ರಕಾಂತ ಚಂಡೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net