ಸರ್ಕಾರಿ ಶಾಲೆ ಉಳಿವಿಗೆ ಶಿಕ್ಷಕರು ಮುಂದಾಗಲಿ

IMG_20240803_155403
Published on

ಬಾಗೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಭದ್ರ ಅಡಿಪಾಯ ಹಾಕಲು ಸರ್ಕಾರಿ ಶಾಲಾ ಶಿಕ್ಷಕರು ಮುಂದಾಗುವಂತೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಧಾ ಮನವಿ ಮಾಡಿದರು.


ಬಾಗೂರು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2007-8ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಳಗದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಪಾಲಕರ ಆಂಗ್ಲ ಮಾಧ್ಯಮದ ಮೇಲಿನ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರು ಉನ್ನತ ಶಿಕ್ಷಣ ಪಡೆದಿದ್ದು, ಅದರ ಅನುಭವದಿಂದ ಮಕ್ಕಳನ್ನು ಸುಲಭ ರೀತಿಯಲ್ಲಿ ಕಲಿಸುತ್ತಾರೆ. ಖಾಸಗಿ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಕಡಿಮೆ ಎಂದರು.


ಸರ್ಕಾರಿ ಶಾಲೆಗಳಲ್ಲಿ ಪಠ್ಯ ಪುಸ್ತಕ ಸಮವಸ್ತ್ರ, ಬಿಸಿಯೂಟ ನೀಡಲಾಗುತ್ತದೆ. ಖಾಸಗಿ ಶಾಲಾ ಕಾಲೇಜುಗಳಲ್ಲಿ ನೋಂದಣಿ ಸೇರಿದಂತೆ ಪ್ರತಿಯೊಂದರ ವೆಚ್ಚವನ್ನು ಪಾಲಕರೇ ಭರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು ತಂದೆ-ತಾಯಿ ಗುರುಗಳು ನೆರೆ ಹೊರೆಯವರ ಜತೆ ಸ್ನೇಹ ಸೌಹಾರ್ದತೆಯಿಂದ ನೆಮ್ಮದಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.


ಬಾಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜ್ಯೋತಿ, ಶಿಕ್ಷಕರು ಮಂಜುನಾಥ್, ಹಿರಣ್ಣಯ್ಯ, ಎಸ್.ಎಚ್. ಸತೀಶ್, ರಾಮಸ್ವಾಮಿ, ಹಲಗೇ ಗೌಡ, ರಂಗಸ್ವಾಮಿ, ಬಸವರಾಜ್, ಶೋಭಾ, ಸತ್ಯನಾರಾಯಣ ಹಾಗೂ ಶಿಕ್ಷಕ ವೃಂದದವರನ್ನು ವಿದ್ಯಾರ್ಥಿ ಬಳಗದಿಂದ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net