

ಮೈಸೂರು: ಶಿಕ್ಷಕರು ತಂತ್ರಜ್ಞಾನದ ಬಳಕೆಯಲ್ಲಿ ಒಂದು ಹೆಜ್ಜೆ ಮುಂದೆ ಇರಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ಅಧ್ಯಕ್ಷೆ ಡಾ.ಜಿ.ಶೀಲಾ ಹೇಳಿದರು.
ನಗರದ ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿ.ಇಡಿ. ಕಾಲೇಜಿನಲ್ಲಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯಬೇಕಾಗಿದೆ. ಈಗಿನ ಕಾಲದ ಮಕ್ಕಳು ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳುವ ತಂತ್ರವನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಿರುವಾಗ ತಂತ್ರಜ್ಞಾನ ಬಳಕೆಯಲ್ಲಿ ಶಿಕ್ಷಕರು ಪರಿಣಿತರಾಗಬೇಕು ಎಂದರು.
ಪ್ರಶಿಕ್ಷಣಾರ್ಥಿಗಳು ತಂತ್ರಜ್ಞಾನ ಬಳಕೆ ಎಷ್ಟು ಅತ್ಯುತ್ತಮವಾಗಿ ತಿಳಿದುಕೊಂಡಿದ್ದಾರೆಯೋ ಅಷ್ಟರ ಮಟ್ಟಿಗೆ ಮಕ್ಕಳಲ್ಲಿರುವ ಜ್ಞಾನವನ್ನು ಹೊರ ತೆಗೆಯಲು ಅನುಕೂಲವಾಗುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗರಾಜು ಮಾತನಾಡಿ, ಹೆಣ್ಣು ಮಕ್ಕಳು ಹೆಚ್ಚಿನ ಶಿಸ್ತನ್ನು ರೂಢಿಸಿಕೊಳ್ಳುವುದರ ಜತೆಗೆ ಸಮಯ ವ್ಯರ್ಥ ಮಾಡದ ಗುಣ ಮೈಗೂಡಿಸಿಕೊಳ್ಳಬೇಕು. ಇವುಗಳೊಂದಿಗೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಅದರ ಸಾಧನೆಗೆ ರೂಪುರೇಷೆ ಸಿದ್ಧ್ದಪಡಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಮುಂದೆ ಶಿಕ್ಷಕರಾಗುವವರಿಗೆ ಮಾತು ಎಂಬುದು ಅತ್ಯಮೂಲ್ಯವಾದದ್ದು. ಮಾತೇ ಉದ್ಯೋಗ, ಮಾತೇ ನಡವಳಿಕೆಯಾಗಿರುತ್ತದೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾನವಾಗಿ ನೋಡುವ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ವೃತ್ತಿ ಇದಾಗಿರುತ್ತದೆ ಎಂದು ಹೇಳಿದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಿ.ಎನ್.ಸಂತೋಷ್ ಪಟೇಲ್ ಇನ್ನಿತರರಿದ್ದರು.