

ಚಿಕ್ಕೋಡಿ: ಜನಪದ ಪುರಾತನ ಸಂಸ್ಕೃತಿಯಾಗಿದ್ದು, ಅದರ ವಿಚಾರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಧ್ಯಾಪಕ ಡಾ.ನಂದಕುಮಾರ ಶಿಂಧೆ ಹೇಳಿದರು.
ಇಲ್ಲಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರಿಗೆ ಶೈಕ್ಷಣಿಕ ಸಾಧನವಾಗಿ ಜನಪದ ಸಾಹಿತ್ಯದ ಬಳಕೆ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನಪದ ಸಾಹಿತ್ಯವು ಸಾಂಸ್ಕೃತಿಕವಾಗಿ ಜನರನ್ನು ಒಗ್ಗೂಡಿಸುತ್ತದೆ. ಶಿಕ್ಷಕರಾದವರು ಜನಪದ ಕಲೆ ಅರಿತು ತರಗತಿಯ ಬೋಧನೆಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ಕನಕಾಚಲ ಕನಕಗಿರಿ ಮಾತನಾಡಿ, ಜನಪದ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂವೇದನಶೀಲರನ್ನಾಗಿಸಲು ಶಿಕ್ಷಕರು ಪ್ರಯತ್ನ ಮಾಡಬೇಕಾಗಿದೆ ಎಂದರು.
ಪ್ರಶಿಕ್ಷಣಾರ್ಥಿಗಳು ಜನಪದ ಶೈಲಿಯ ಗಾಯನ, ಡೊಳ್ಳು ಕುಣಿತ, ಕೋಲಾಟ, ಕಂಸಾಳೆ ಜನಪದ ನತ್ಯ ಪ್ರದರ್ಶನ ನೀಡಿದರು. ಪ್ರಶಿಕ್ಷಣಾರ್ಥಿಗಳಾದ ಶ್ರೀದೇವಿ ಪೂಜಾರಿ, ರಂಜಿತ್ ಕುಕಟೆ, ಬನ್ನಪ್ಪ ಅನಿಸಿಕೆ ವ್ಯಕ್ತಪಡಿಸಿದರು ಎಂ.ಎಚ್.ರಾವುತ್, ಕವಿತಾ ಹರಕೆ, ಆಸ್ಮಾ ಜಮಾದಾರ್, ಉಜ್ವಲ ಮಾನೆ, ಪ್ರಶಾಂತ ಪತ್ತಾರ, ಕೃಷ್ಣಾ ಅರ್ಗೆ, ಸ್ವಪ್ನ ಅಸುರೆ ಉಪಸ್ಥಿತರಿದ್ದರು.