

ಬೆಳಗಾವಿ: ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳ ವೃತ್ತಿಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವೆಂಕಪ್ಪಯ್ಯ ಆರ್.ದೇಸಾಯಿ ಹೇಳಿದರು. ನಗರದ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಕಾಹೆರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯೆ ಕಲಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ಮನೋಪ್ರವೃತ್ತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಗುರು- ಶಿಷ್ಯರ ಸಂಬಂಧ ಶಾಶ್ವತವಾಗಿ ಉಳಿಯಬೇಕು ಎಂದರು. ಕಾಹೆರ ಉಪಕುಲಪತಿ ಡಾ.ನಿತಿನ್ ಗಂಗಾನೆ ಮಾತನಾಡಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕಾಹೆರ್ ವಿವಿಧ ಯೋಜನೆ ಹಾಕಿಕೊಂಡಿದೆ. ಕಾಹೆರ್‌ನಿಂದ ಲಭ್ಯವಿರುವ ಅನುದಾನ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಹೇಳಿದರು. ಅತ್ಯುತ್ತಮ ವಿಜ್ಞಾನಿ ಪ್ರಶಸ್ತಿ, ಅತ್ಯುತ್ತಮ ಯುವ ವಿಜ್ಞಾನಿ ಪ್ರಶಸ್ತಿ, ಅತ್ಯುತ್ತಮ ಪಿಎಚ್.ಡಿ ಮತ್ತು ಅತ್ಯುತ್ತಮ ಪಿಜಿ ಪ್ರಬಂಧ ಪ್ರಶಸ್ತಿ, ಉತ್ತಮ ಶಿಕ್ಷಕರ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ಸ್ಪರ್ಧಾ ವಿಜೇತರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಡಾ.ರೇಖಾ ಪಾಟೀಲ, ಡಾ.ತೇಜಶ್ರೀ, ಡಾ.ಹರಪ್ರೀತ್ ಕೌರ್ ಇತರರಿದ್ದರು.