ಶಿಕ್ಷಕ ಸಮಾಜಕ್ಕೆ ಆದರ್ಶನಾಗಿರಲಿ

22 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಬ್ಬ ಶಿಕ್ಷಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಉಳಿಯಬೇಕಾದರೆ ಅವನಲ್ಲಿರುವ ಮೌಲ್ಯಗಳೇ ಕಾರಣ. ಅದಕ್ಕೆ ಸಾಕ್ಷಿ. ಪ್ರೊ. ಕೆ.ಬಿ. ಗುಡಸಿ. ಅವರು ಒಬ್ಬ ಸಂಶೋಧಕ, ಆಡಳಿತಗಾರ, ಶಿಕ್ಷಕನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ತೋಂಟದಾರ್ಯ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಪ್ರೊ.ಕೆ.ಬಿ.ಗುಡಸಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರೊ.ಕೆ.ಬಿ.ಗುಡಸಿ ಅಭಿನಂದನಾ ಸಮಾರಂಭದಲ್ಲಿ "ಘನಮನಸಂಪನ್ನರು' ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರೊ.ಕೆ.ಬಿ.ಗುಡಸಿ ಅವರೊಬ್ಬ ಆದರ್ಶ ಕುಲಪತಿ. ಸಹೃದಯದ ಸೌಜನ್ಯ ಹೊಂದಿದ ವ್ಯಕ್ತಿತ್ವ ಹೊಂದಿದ್ದಾರೆ. ಉನ್ನತ ಸ್ಥಾನ ತಲುಪಿದಾಗ ವ್ಯಕ್ತಿಗೆ ಅಹಂ ಬರಬಾರದು. ಶಿಕ್ಷಕನಾದವನು ಸಮಾಜಕ್ಕೆ ಆದರ್ಶನಾಗಬೇಕು. ಗುಡಸಿ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿ ಕವಿವಿ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿದ್ದು ಮೆಚ್ಚಬೇಕಾದ ಸಂಗತಿ ಎಂದರು.
ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ ಮಾತನಾಡಿ, ಪ್ರೊ.ಕೆ.ಬಿ.ಗುಡಸಿ ಒಬ್ಬ ಶಿಕ್ಷಕ, ಸಂಶೋಧಕ ಮತ್ತು ಸಮರ್ಥ ಆಡಳಿತಗಾರ. ಅನೇಕ ವಿದ್ಯಾರ್ಥಿಗಳ ಹೃದಯ ಗೆದ್ದಿದ್ದಾರೆ ಎಂದ ಅವರು, ಕವಿವಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ಸಮರ್ಥ ರೀತಿಯಲ್ಲಿ ಹಣಕಾಸಿನ ಪರಿಸ್ಥಿತಿ ಎದುರಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ನನ್ನ ಜೀವನದಲ್ಲಿ ಬಸವಣ್ಣನವರ ಕೆಲ ವಚನಗಳನ್ನು ಅಳವಡಿಸಿಕೊಂಡಿದ್ದೇನೆ. ಬಾಲ್ಯದಿಂದಲೇ ಸವಾಲುಗಳನ್ನು ಎದುರಿಸಲು ಶಕ್ತಿ ಸಿಕ್ಕಿರುವುದು ನನ್ನ ಶಿಕ್ಷಕ ಬಾಬುರಾವ ಬಡಿಗೇರ ಮತ್ತು ತಂದೆ-ತಾಯಿಯಿಂದ ಸಿಕ್ಕ ಸಂಸ್ಕಾರದಿಂದ. ಕವಿವಿಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಆಡಳಿತದಲ್ಲಿ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು ಎಂದರು.
ಡಾ. ಎಂ.ಪಿ.ನಾಡಗೌಡ, ಮಾಜಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿದರು. ಗ್ರಂಥ ಕುರಿತು ಡಾ.ವೀರಣ್ಣ ರಾಜೂರ ಮಾತನಾಡಿದರು. ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಶಾಸಕ ಎನ್​.ಎಚ್​. ಕೊನರಡ್ಡಿ ಅವರು ಕುಲಪತಿ ಪ್ರೊ.ಕೆ.ಬಿ.ಗುಡಸಿ ದಂಪತಿಗೆ ಸನ್ಮಾನಿಸಿದರು.
ಕವಿವಿ ಕುಲಸಚಿವರಾದ ಡಾ. ಎ.ಚೆನ್ನಪ್ಪ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ವಿತ್ತಾಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಡಾ.ಶಶಿಕಲಾ ಗುಡಸಿ, ಡಾ. ಬಿ.ಡಿ.ಕುಂಬಾರ, ಡಾ.ಬಾನುಮೂರ್ತಿ, ಗುಡಸಿ ಅವರು ಅಭಿಮಾನಿಗಳು, ಕುಟುಂಬಸ್ಥರು, ಇತರರು ಇದ್ದರು. ಡಾ.ರವೀಂದ್ರ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net