

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಭಾಗದಲ್ಲಿ ಎಲ್ಲ ಪ್ರಕಾರದ ಕಲೆಗಳಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಅವರ ಪ್ರತಿಭೆಗೆ ತಕ್ಕ ಅವಕಾಶಗಳು ಸಿಗದಿರುವುದೇ ಬೇಸರದ ಸಂಗತಿ. ಕಲೆಗಳು ಉಳಿಯುತ್ತಿರುವುದು ಗ್ರಾಮೀಣ ಭಾಗದ ಕಲಾವಿದರಿಂದ. ಹೀಗಾಗಿ ಸರ್ಕಾರ ಸರ್ಕಾರ ಮತ್ತು ಪ್ರಾತಿನಿಧಿಕ ಸಂಸ್ಥೆಗಳು ಗ್ರಾಮೀಣ ಭಾಗದ ಕಲಾವಿದರಿಗೆ ಹೆಚ್ಚು ಅವಕಾಶ ನೀಡುವ ಯೋಜನೆಗಳನ್ನು ರೂಪಿಸಬೇಕು ಎಂದು ಕಲಾವಿದ ಶಶಿಧರ ಗರಗ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕಸಾಪ ಅಮ್ಮಿನಭಾವಿ ಹೋಬಳಿ ಘಟಕ ಹಾಗೂ ಬ್ರಹ್ಮಪುರಿ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಹೆಬ್ಬಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಹೋಬಳಿ ಘಟಕ ಕ್ರಿಯಾಶೀಲ ಕಾರ್ಯದೊಂದಿಗೆ ಕಲೆ ಸಾಹಿತ್ಯ, ಜಾನಪದ ಕಲಾ ಪ್ರಕಾರಗಳನ್ನು ಗ್ರಾಮೀಣ ಭಾಗದ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತ ಸಕ್ರೀಯವಾಗಿರುವುದು ಜಿಲ್ಲಾ ಘಟಕಕ್ಕೂ ಪ್ರೇರಣೆ ಯಾಗಿದೆ ಎಂದರು.
ಸಾಹಿತಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ನಿರಂತರವಾಗಿ ಶ್ರಮವಹಿಸಿದ ಕಾರ್ಯಕ್ಕೆ ಸಮಾಜದ ಸಹಕಾರ, ಪ್ರೋತ್ಸಾಹ ಸಿಕ್ಕಾಗ ಸಿಗುವ ಆನಂದ ಮತ್ತೆಲ್ಲಿ ಸಿಗುವುದಿಲ್ಲ. ಐತಿಹಾಸಿಕ ಹೊಂದಿದ ಹೆಬ್ಬಳ್ಳಿ ಗ್ರಾಮವನ್ನು ನಾಡಹಬ್ಬ ಮೈಸೂರು ದಸರಾದಲ್ಲಿ ಸ್ತಬ್ಧ ಚಿತ್ರದೊಂದಿಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕಲಾವಿದರಾದ ಶಶಿಧರ ಗರಗ ಮತ್ತು ಮಹೇಶ ಬಡಿಗೇರ ಅಭಿನಂದನಾರ್ಹರು ಎಂದರು.
ಸಾನ್ನಿಧ್ಯ ವಹಿಸಿದ್ದ ಚರಂತಯ್ಯ ಹಿರೇಮಠ ಶಿವಾನುಭವ ಗೋಷ್ಠಿ ನಡೆಸಿ ಪ್ರವಚನ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್, ಮುಖಂಡ ಬಸವರಾಜ ತಂಬಾಕದ, ನಿರ್ಮಲಾ ಹಾವೇರಿ, ಬ್ರಹ್ಮಪುರಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿದರು.
ಅಮ್ಮಿನಭಾವಿ ಹೋಬಳಿ ಘಟಕದ ಅಧ್ಯಕ್ಷ ಡಾ ಬಸವರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರ ದಸರಾದಲ್ಲಿ ಸ್ತಬ್ಧ ಚಿತ್ರ ತಯಾರಿಸಿ ಬಹುಮಾನ ಪಡೆದ ಶಶಿಧರ ಗರಗ ಮತ್ತು ಮಹೇಶ ಬಡಿಗೇರ ಅವರಿಗೆ ಸನ್ಮಾನಿಸಲಾಯಿತು.
ಈರಣ್ಣ ಹುಬ್ಬಳ್ಳಿ, ಎಸ್.ಎ. ಹಾವೇರಿ, ಇತರರು ಇದ್ದರು.