

ಪಿರಿಯಾಪಟ್ಟಣ: ಸಂವಿಧಾನದ ಆಶಯದಂತೆ ಜನಸಾಮಾನ್ಯರು ಘನತೆಯಿಂದ ಬದುಕಬೇಕು ಎಂಬ ಚೌಕಟ್ಟಿನಡಿಯಲ್ಲಿ ಜೀತ ಪದ್ಧತಿ ನಿಷೇಧ ಕಾಯ್ದೆ ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಉದಯೋನ್ಮುಖ ಜೀತ ವಿಮುಕ್ತರ ಸಂಘ ಹಾಗೂ ಐಜೆಎಂ ಸ್ವಯಂ ಸೇವಾ ಸಂಸ್ಥೆಯಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಶುಕ್ರವಾರ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣಿಕೆ ಮತ್ತು ಜೀತ ಪದ್ಧತಿ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾಯ್ದೆಗಳ ಬಗ್ಗೆ ಗೊಂದಲವಾದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಖ್ಯಾನ ಮಾಡಿ ತೀರ್ಪು ನೀಡುವ ಮೂಲಕ ಕಾಲಕಾಲಕ್ಕೆ ಕಾಯ್ದೆಗಳಿಗೆ ಬಲ ತುಂಬಲಾಗುತ್ತಿದೆ ಎಂದರು. ಒಂದು ನಿರ್ದಿಷ್ಟ ಜಾತಿ ಅಥವಾ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಸಾಂಪ್ರದಾಯಕವಾಗಿ ಜೀತ ಮಾಡಲೇಬೇಕು ಎಂಬ ಯಾವುದೇ ಒತ್ತಾಯ ಇಲ್ಲ. ಇತ್ತೀಚೆಗೆ ಕಾಲಿಗೆ ಸರಪಳಿ ಬಿಗಿದು ಹೋಟೆಲ್ ನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ಪ್ರಕರಣ ಪತ್ತೆಯಾಗಿತ್ತು. ಈ ರೀತಿ ಅಕ್ರಮವಾಗಿ ನಿಬರ್ಂಧದಲ್ಲಿಟ್ಟು ಜೀತ ಪದ್ಧತಿಗೆ ದೂಡುವಂತ ಹೇಯ ಕೃತ್ಯ ಮಾಡಿದಲ್ಲಿ ಕಾನೂನಿನಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಎಚ್ಚರಿಸಿದರು.
ಇಂತಹ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕಬೇಕೆಂದು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಉದ್ದೇಶ ಈಡೇರಬೇಕಿದ್ದರೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯ ಎಂದರು. ಜೀತ ಪದ್ಧತಿ ಅಥವಾ ಬಾಲಕಾರ್ಮಿಕ ಪದ್ಧತಿ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೇಶ್ ಮಾತನಾಡಿ, ಯಾವುದೇ ರೀತಿಯಲ್ಲಿ ಮಾಸಿಕ ಹಾಗೂ ದಿನಗೂಲಿ ನೀಡದೆ ದುಡಿಸಿಕೊಳ್ಳುವುದು ಜೀತ ಪದ್ಧತಿ ಎನಿಸಿಕೊಳ್ಳಲಿದೆ. ಇದನ್ನು ತಡೆಯಲು ಅರಿವು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಮಾನವ ಕಳ್ಳ ಸಾಗಣೆ ತಡೆ ವಿಶೇಷ ಕಾರ್ಯಪಡೆಯ ಸದಸ್ಯ ವಿಲಿಯಂ ಕ್ರಿಸ್ಟೋಫರ್, ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್ ಮಾತನಾಡಿದರು. ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಸುನಿಲ್ ಕುಮಾರ್, ಸಿಡಿಪಿಒ ಡಿ.ಜೆ.ಮಮತಾ, ಸಮಾಜ ಸೇವಕಿ ಪ್ರೈಜಿ ಗ್ಲೋರಿಯಾ ಬಾಯ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ಲೀಲಾವತಿ ಇದ್ದರು.