

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಿತ್ತೂರು ಸಂಸ್ಥಾನ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ದೇಸಗತಿ. ವಿಜಯನಗರ ಸಾಮ್ರಾಜ್ಯ ಪತನದ ನಂತರ ತಲೆಯೆತ್ತಿದ ಅನೇಕ ಸಂಸ್ಥಾನಗಳಲ್ಲಿ ಕಿತ್ತೂರು ಸಂಸ್ಥಾನವೂ ಒಂದು. ಕಿತ್ತೂರು ದೇಸಾಯಿಯವರ ಮತ್ತು ರಾಣಿ ಚೆನ್ನಮ್ಮನ ಕಾಲದ ಮರಾಠಿ ಮೋಡಿ ದಾಖಲೆಗಳು ಪುಣೆಯ ಪತ್ರಾಗಾರದಲ್ಲಿ ನೋಡಲು ಸಿಗುತ್ತವೆ. ಸುಮಾರು 75 ರುಮಾಲುಗಳಲ್ಲಿ ಮೋಡಿ ಕಾಗದ ಪತ್ರಗಳಿದ್ದು, ಅವುಗಳ ಅಧ್ಯಯನವಾಗಬೇಕಿದೆ ಎಂದು ಇತಿಹಾಸ ತಜ್ಞ ಡಾ. ಎಂ.ವೈ. ಸಾವಂತ ಹೇಳಿದರು.
ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ಸಾಧನಕೇರಿ ಚೈತ್ರ ಸಭಾಂಗಣದಲ್ಲಿ ಏರ್ಪಡಿಸಿದ್ದ "ಮೋಡಿ ದಾಖಲೆಗಳಲ್ಲಿ ರಾಣಿಚೆನ್ನಮ್ಮನ ಕಿತ್ತೂರಿನ ಇತಿಹಾಸ' ಕುರಿತು ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಹಲವಾರು ಮೋಡಿ ದಾಖಲೆಗಳನ್ನು "ಕರ್ನಾಟಕ ಜಮಾವ' ಎಂಬ ವಿಭಾಗದಲ್ಲಿ ಪುಣೆಯ ಪತ್ರಾಗಾರದಲ್ಲಿ ಸಂಗ್ರಹಿಸಲಾಗಿದೆ. ಸಂಬಂಧಪಟ್ಟ ಇಲಾಖೆಯವರು ರುಮಾಲುಗಳಲ್ಲಿರುವ ದಾಖಲೆಗಳನ್ನು ಝರಾಕ್ಸ ಮಾಡಿ ಧಾರವಾಡದ ಪತ್ರಾಗಾರದಲ್ಲಿ ಸಂಶೋಧನೆಗಾಗಿ ಇಡಬಹುದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಗಿರಿಧರ ಕಿನ್ನಾಳ ಮಾತನಾಡಿ, ಇಂದಿನ ದಿನಗಳಲ್ಲಿ ಮೋಡಿ ಕಲಿಯುವವರ ಸಂಖ್ಯೆ ಹೆಚ್ಚಿದೆ. ಸ್ಥಳಿಯ ಇತಿಹಾಸ ಸಂಶೋಧನಾ ಮಂಡಳಿಯಲ್ಲಿ ಮೋಡಿ ಲಿಪಿ ತರಗತಿಗಳನ್ನು ಆರಂಭಿಸಲಾಗಿದೆ. ಇದರ ಪ್ರಯೋಜನ ಪಡೆಯಬೇಕು ಎಂದರು.
ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ಅನಿಲ ಕಾಖಂಡಿಕಿ, ಡಾ. ಬಾಳಣ್ಣ ಶೀಗಿಹಳ್ಳಿ, ರಮೇಶ ಇಟ್ನಾಳ, ಡಾ. ಅರವಿಂದ ಯಾಳಗಿ, ಎನ್.ಜಿ. ರಸಾಳಕರ, ಮಹಾಬಲೇಶ್ವರ ಸಿಂದಗಿ, ಹರ್ಷ ಡಂಬಳ, ಎಸ್.ಬಿ. ದ್ವಾರಪಾಲಕ, ಅನಂತ ಥಿಟೆ, ಡಾ. ಅರುಣ ಅಂಗಡಿ, ಪ್ರೊ. ಸಿ.ಆರ್. ಜೋಶಿ, ಶ್ರೀಕಾಂತ ಬೀಳಗಿ, ಆರ್.ಎಂ. ಹೊಸಮನಿ, ಎಸ್.ಎಸ್. ಬಂಗಾರಿಮಠ, ಇತರರು ಇದ್ದರು.