

ಎಚ್.ಡಿ.ಕೋಟೆ: ತಾಲೂಕಿನಲ್ಲಿ ಕಾಲೇಜು ಶಿಕ್ಷಣ ಪಡೆಯಲು ಪರದಾಡುತ್ತಿದ್ದ ಮೂವತ್ತು ವರ್ಷಗಳ ಹಿಂದೆ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮನಸು ಮಾಡಿ ತಾಲೂಕು ಕೇಂದ್ರದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಕಾಲೇಜು ಶಿಕ್ಷಣಕ್ಕೆ ಅನುವು ಮಾಡಿಕೊಟ್ಟು ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದರು ಎಂದು ಆದಿಚುಂಚನಗಿರಿ ಮೈಸೂರು ಶಾಖೆ ಮಠಾಧ್ಯಕ್ಷ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರಸ್ತುತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಅಕ್ಷರಸ್ಥರೆನಿಸಿಕೊಂಡ ಕೆಲವರು ತಂದೆ, ತಾಯಿಗೆ ಗೌರವವನ್ನು ನೀಡುತ್ತಿಲ್ಲದಿರುವುದನ್ನು ಕಾಣುತ್ತಿದ್ದೇವೆ. ಅಕ್ಷರಸ್ಥರು ಸಮಾಜದಲ್ಲಿ ದಾರಿ ತಪ್ಪಬಾರದು. ತಂದೆ, ತಾಯಿ ಸಂಕಲ್ಪವನ್ನು ಈಡೇರಿಸುವ ಕಾರ್ಯ ಮಾಡಬೇಕು. ಅದು ಅವಿರತ ಶ್ರಮದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಗುರಿ ಇಟ್ಟುಕೊಂಡು ಬದಲಾವಣೆ ಕಾಣಬೇಕು. ಗ್ರಾಮೀಣ ಭಾಗದ ಮಕ್ಕಳು ನಿರರ್ಗಳವಾಗಿ ಮಾತಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದರು ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಎಂದು ಹೇಳಿದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಚಂದ್ರೇಗೌಡ ಮಾತನಾಡಿ, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸು ದೊರೆಯಲು ಸಾಧ್ಯ. ಹೊಸ ಯತ್ನಕ್ಕೆ ಹಳೇ ತತ್ವಗಳೇ ದಾರಿ ದೀಪವಾಗಬೇಕು. ಹೆಚ್ಚು ಅಂಕ ಗಳಿಸಲು, ಚಿನ್ನದ ಪದಕಗಳನ್ನು ಪಡೆಯುವುದೇ ಶಿಕ್ಷಣದ ಗುರಿಯಾಗಬಾರದು, ಯಾವರೀತಿ ಸಮಾಜದಲ್ಲಿ ಬದುಕಬೇಕು ಎಂಬುದನ್ನು ಸಹ ಅಭ್ಯಾಸ ಮಾಡುವುದೇ ವಿದ್ಯಾಭ್ಯಾಸದ ಮೂಲ ತತ್ವವಾಗಿದೆ ಎಂದರು.
ವಿವಿಧ ಕ್ರೀಡಾ ವಿಭಾಗಗಳಲ್ಲಿ ಪ್ರತಿಭೆ ತೋರಿದ ಮತ್ತು ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಂಶುಪಾಲ ಜೆ.ಎನ್.ವೆಂಕಟೇಶ್, ಭೈರೇಗೌಡ, ಎ.ಸಿ.ಭೈರಪ್ಪ, ಬೀಚನಹಳ್ಳಿ ಕಾಲೇಜಿನ ಪ್ರಾಂಶುಪಾಲ ಕಾಳಿಂಗೇಗೌಡ, ಮುಖಂಡ ಎ.ಜೆ. ಕಾಳೇಗೌಡ, ಸೆನಟ್ ಮಾಜಿ ಸದಸ್ಯ ಕೃಷ್ಣೇಗೌಡ, ಯರಹಳ್ಳಿ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ್ ಪ್ರಸಾದ್, ಕೆ. ಗೀತಾ, ರತ್ನಪ್ಪ, ಭೀಮಪ್ಪ ಮಲ್ಲಪ್ಪ, ಸಿಬ್ಬಂದಿ ರಾಜೇಶ್, ಮಲ್ಲೇಶ್, ಅಂಕಪ್ಪ ಇದ್ದರು.