

ಅರಸೀಕೆರೆ: ದೇಶದ ದಾಸ್ಯ ವಿಮೋಚನೆಗಾಗಿ ಹೋರಾಟ ನಡೆಸಿದ ಮಹನೀಯರನ್ನು ವಿದ್ಯಾರ್ಥಿಗಳು ಸ್ಮರಿಸಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾಬ್ ಕುಮಾರ್ ಹೇಳಿದರು.
ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಗಳಿಸಲು ಬ್ರಿಟಿಷರ ವಿರುದ್ಧ ಜವಾಹರಲಾಲ್ ನೆಹರು ಸೇರಿದಂತೆ ಹಲವರು ಹೋರಾಟ ನಡೆಸಿದ್ದಾರೆ. ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿ ಉತ್ತಮ ಆಡಳಿತ ನೀಡಿದ ಹೆಗ್ಗಳಿಕೆಗೆ ಚಾಚಾ ನೆಹರು ಪಾತ್ರರಾಗಿದ್ದಾರೆ. ಅಲ್ಲದೆ ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನದ ಹೆಸರಿನಲ್ಲಿ ಆಚರಿಸಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳು ದೇಶದ ಸಮಗ್ರತೆ ಹಾಗೂ ಐಕ್ಯತೆ ಕಾಪಾಡಲು ಕಂಕಣ ಬದ್ಧರಾಗಬೇಕು ಎಂದು ಹೇಳಿದರು.
ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಸತೀಶ್ ಅಂತವಾನ್, ಪ್ರಾಂಶುಪಾಲ ರೇಣುಕಾರಾಧ್ಯ, ಉಪನ್ಯಾಸಕರಾದ ಗಂಗಾಧರ್, ತಿಮ್ಮೇಗೌಡ, ಮೋಹನ್‌ಕುಮಾರ್ ಇದ್ದರು.