

ಬೀಳಗಿ: ಸಕಲರಿಗೆ ವಿದ್ಯಾದೇವತೆ ಕೃಪೆ ಇದ್ದರೆ ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅಹಂಕಾರ ಹೊರಗಿಟ್ಟು ಎಲ್ಲರೊಂದಿಗೂ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆಯಿಂದ ಇರಬೇಕೆಂದು ಮರೆಗುದ್ದಿಯ ಶ್ರೀ ನಿರುಪಾಧೀಶ ಮಹಾಸ್ವಾಮಿಗಳು ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿವೇಕಾನಂದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾದೇವತೆ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವದಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ(ಮಲ್ಲಣ್ಣ) ಅವರು ಬಾಲ್ಯದಲ್ಲಿ ತಮ್ಮ ಬದುಕಿನ ಜೀವನದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ ಇಂದು ಈ ಸಂಸ್ಥೆ ಉತ್ತರ ಕರ್ನಾಟಕದ ಕಾಶಿ ವಿಶ್ವ ವಿದ್ಯಾಲಯವಾಗಿ ಮಾರ್ಪಟ್ಟಿದೆ. ಆರ್ಥಿಕ ಹಿಂದುಳಿದ ಜನರೂ ಸ್ವಾವಲಂಬಿ ಬದುಕು ನಡೆಸಲೆಂಬ ಉದ್ದೇಶದಿಂದ ಸಹಕಾರಿ ಕ್ಷೇತ್ರದ ಬ್ಯಾಂಕ್, ರೈತರ ಅಭಿವೃದ್ಧಿಗೆ ಅನ್ನದಾತ ಕೇಂದ್ರ ಸೇರಿ ಹಲವಾರು ಸಂಘ- ಸಂಸ್ಥೆಗಳನ್ನು ಹುಟ್ಟು ಹಾಕಿದ ಪಾಟೀಲರ ಕಾರ್ಯ ಶ್ಲಾಘನೀಯ ಎಂದರು.
ಸೋಮಪ್ಪಯ್ಯನ ಮಠದ ಚನ್ನಬಸವ ಮಹಾಸ್ವಾಮಿಗಳು, ನಾಗರಾಳ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಮಹಾಸ್ವಾಮಿಗಳು, ಹುಚ್ಚಪ್ಪಯ್ಯನ ಮಠದ ಕೀರಯ್ಯ ಸ್ವಾಮಿಗಳು, ಜೆಮ್ ಶುಗರ್ಸ್ ನಿರ್ದೇಶಕ ರಾಮನಗೌಡ ಜಕ್ಕನಗೌಡ, ಬಿ.ಪಿ. ಪಾಟೀಲ, ಆಡಳಿತಾಧಿಕಾರಿ ಶಂಕರಗೌಡ ಪಾಟೀಲ, ಶೈಕ್ಷಣಿಕ ನಿರ್ದೇಶಕ ಡಿ.ಎಸ್ .ಕುಂಠೆ, ಪ್ರಾಚಾರ್ಯ ಜಿ.ಆರ್. ಪಾಟೀಲ, ಪ್ರಾಚಾರ್ಯ ಎಸ್.ಎಂ. ಕಲಬುರ್ಗಿ, ರಾಜು ಬೋರ್ಜಿ ಇತರರಿದ್ದರು.
ಎಂ.ಎನ್. ಪಾಟೀಲರ ಜನ್ಮದಿನಕ್ಕೆ ಮರೆಗುದ್ದಿಯ ನೀರುಪಾಧೀಶ ಶ್ರೀಗಳು ಹಾಗೂ ಬೀಳಗಿ ಶ್ರೀಗಳು ಹಾಗೂ ಅಭಿಮಾನಿಗಳು ಶುಭಕೋರಿದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸಂಗ್ರಹಿಸಿದ ಆಹಾರ ಧಾನ್ಯ ಪದಾರ್ಥಗಳನ್ನು ವೃದ್ಧಾಶ್ರಮಗಳಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.