

ರಾಮದುರ್ಗ: ವಿದ್ಯಾರ್ಥಿಗಳು ಸೌಲಭ್ಯಗಳನ್ನು ಬಳಸಿಕೊಂಡು ನಿರಂತರ ವ್ಯಾಸಂಗ ಮಾಡಿ ಉನ್ನತ ಸಾಧನೆ ಮಾಡಬೇಕು ಎಂದು ಯುವ ಮುಖಂಡ ಪ್ರದೀಪ ಪಟ್ಟಣ ಹೇಳಿದರು.
ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ನೌಕರರ ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆ ಮಹತ್ವ ನೀಡದೆ ವ್ಯಾಸಂಗ ಮಾಡುತ್ತಿರಬೇಕು. ಶಿಕ್ಷಕರು, ಪಾಲಕರನ್ನು ಗೌರವದಿಂದ ಕಾಣಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಮಾತನಾಡಿ, ನೌಕರರ ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಸತ್ಕಾರದಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಲಿದೆ ಎಂದರು. ತಹಸೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಈಗಿನಿಂದಲೇ ತಯಾರಿ ಮಾಡಿಕೊಂಡರೆ ನಿಗದಿತ ಗುರಿ ಸಾಧನೆ ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಐ.ವೈ. ಪವಾಡಿಗೌಡ್ರ, ವಿದ್ಯಾರ್ಥಿಗಳು ವ್ಯಾಸಂಗದ ಜತೆಗೆ ಉನ್ನತ ಹುದ್ದೆ ಪಡೆಯುವ ಗುರಿಯಿಟ್ಟುಕೊಳ್ಳಬೇಕು. ನೌಕರರ ಮಕ್ಕಳಿಗೆ ಸಂಘ ಸದಾ ಪ್ರೋತ್ಸಾಹ ನೀಡಲಿದೆ ಎಂದರು. ಸಂಘದ ಪದಾಧಿಕಾರಿಗಳಾದ ಮಂಜುನಾಥ ಬೇವಿನಕಟ್ಟಿ, ಶೋಭಾ ಚಚಡಿ, ಶಿವು ಯರಗುದರಿ, ಅಶೋಕ ಪಾಟೀಲ, ಅಶೋಕ ಹಕಾಟಿ, ಶಿವು ಗೊರವನಕೊಳ್ಳ ಇತರರಿದ್ದರು. ಖಜಾಂಚಿ ಬಿ.ಬಿ. ಹರನಟ್ಟಿ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್. ಜಂಗವಾಡ ನಿರೂಪಿಸಿದರು. ಉಪನ್ಯಾಸಕ ಸಿದ್ದಪ್ಪ ಕಟ್ಟೇಕಾರ ವಂದಿಸಿದರು.