

ಕುಂದಾಪುರ: ಕಳೆದ ಕೆಲವು ವರ್ಷಗಳ ಹಿಂದೆ ಕ್ರೀಡಾ ಪ್ರತಿಭೆಗಳಿದ್ದರೂ ಅವರಿಗೆ ಸರಿಯಾದ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆಯಿಂದ ಹಾಗೂ ಶಾಲೆಯಿಂದ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಹಲವು ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಲು ಸಾಧ್ಯವಾಗುತ್ತಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಕ್ರೀಡಾಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ.ವೆಂಕಟೇಶ ಶೆಣೈ ಹೇಳಿದರು. ಉಡುಪಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್, ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ರೋಟರಿ ಕ್ಲಬ್ ಮತ್ತು ಎಸ್.ವಿ. ಶಾಲೆಗಳ ಹಳೇ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಎಸ್.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಮಟ್ಟದ ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟಿ ಪಂದ್ಯಾಟವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಜಿಎಸ್‌ವಿಎಸ್ ಅಸೋಸಿಯೇಶನ್ ಸದಸ್ಯ ಕೆ.ರಾಮನಾಥ ನಾಯಕ್, ಉಡುಪಿ ಜಿಲ್ಲೆ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಗೌರವಾಧ್ಯಕ್ಷ ಜೀವನ್‌ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಕ್ರೀಡಾ ಸಂಚಾಲಕ ರಾಮ ಶೆಟ್ಟಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಥಾಮಸ್ ಪಿ.ಎ. ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷಯಾ ಆರ್. ಕಾರ್ಯಕ್ರಮ ನಿರ್ವಹಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣಾ ಆರ್.ಕೆ. ವಂದಿಸಿದರು.