

ಮೈಸೂರು: ವಿದ್ಯಾರ್ಥಿಗಳು ಪರೀಕ್ಷೆ ಎಂಬ ಭಯ ಗೆದ್ದರೆ, ಬದುಕಿನಲ್ಲಿ ಏನಾದರೂ ಸಾಧಿಸಬಹುದು ಎಂದು ಶ್ರೀ ರಾಮಕೃಷ್ಣ ವಿದ್ಯಾಲಯ ವ್ಯವಸ್ಥಾಪಕ ಯುಕ್ತೇಶಾನಂದ ಸ್ವಾಮೀಜಿ ಹೇಳಿದರು.
ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ವಿಜಯನಗರದ ಕೊಂಕಣಿ ಭವನದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಗುರಿ ಇಟ್ಟುಕೊಂಡು ಓದಿದರೆ ಫಲಿತಾಂಶ ಉತ್ತಮವಾಗಿ ಬರಲಿದೆ. ಜತೆಯಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ ದೊರೆಯಲಿದೆ. ಓದಿನ ಮೇಲಿನ ಉತ್ಸಾಹವೂ ವೃದ್ಧಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯ ಬಿಟ್ಟು, ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಬೇಕು ಎಂದು ಕಿವಿಮಾತು ತಿಳಿಸಿದರು.
ಮೈಸೂರು ತಾಲೂಕಿನ ಇಲವಾಲದ ಕೆಪಿಎಸ್ ಪ್ರೌಢಶಾಲೆ, ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆ, ಹಿನಕಲ್‌ನ ಸರ್ಕಾರಿ ಪ್ರೌಢಶಾಲೆ, ಮಂಚೇಗೌಡನಕೊಪ್ಪಲಿನ ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಚ್.ಕೆ. ಪಾಂಡು, ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿವೇಕಾನಂದ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಜಾನ್ ವಿಲಿಯಂ ಡಿಸೋಜ, ಉಪಾಧ್ಯಕ್ಷ ಎಸ್.ಆರ್.ಲೋಬೊ, ಕಾರ್ಯದರ್ಶಿ ಜಾಯ್ಸ ಸಿಕ್ವೇರಾ ಪಾಲ್ಗೊಂಡಿದ್ದರು.