Let the students master the language

ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಜೆ.ಮಂಜುನಾಥ್, ಬಿಇಒ ಎಸ್.ಪಿ.ಮಹದೇವ, ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ, ತ್ರಿನೇಶ್, ಪ್ರೊ.ಮಂಜು ಇತರರಿದ್ದಾರೆ.
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಜೆ.ಮಂಜುನಾಥ್, ಬಿಇಒ ಎಸ್.ಪಿ.ಮಹದೇವ, ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ, ತ್ರಿನೇಶ್, ಪ್ರೊ.ಮಂಜು ಇತರರಿದ್ದಾರೆ.
Published on

ಹುಣಸೂರು: ಸಂಪದ್ಭರಿತ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳನ್ನು ಓದಿ ಅರ್ಥೈಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಭಾಷಾ ಪ್ರಭುತ್ವವನ್ನು ಸಾಧಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಸಲಹೆ ನೀಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಮತ್ತು ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ, ಕನ್ನಡ ಗೀತೆಗಳ ಗಾಯನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಸಾರಸ್ವತ ಲೋಕ ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿದೆ. ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಮೇಲಿನ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಕನ್ನಡ ಮಾಧ್ಯಮದಲ್ಲೇ ಸ್ನಾತಕೋತ್ತರ ಪದವಿ ಮಾಡಿಕೊಂಡು ಸಾಧನೆಯ ಶಿಖರವನ್ನೇರಿದ ಸಾಕಷ್ಟು ಜನರು ನಮ್ಮ ಮುಂದೆ ಇದ್ದಾರೆ. ಭಾಷೆಯ ಮೇಲಿನ ಮೋಹ, ಅಭಿಮಾನ, ಎಲ್ಲವೂ ಇದ್ದಲ್ಲಿ ಇಂತಹ ಸಾಧನೆ ಸಾಧ್ಯ ಎಂದರು.

ರೀಲ್ಸ್ ವ್ಯಾಮೋಹ ಬೇಡ: ಸತತ ಅಧ್ಯಯನ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕಾಲಘಟ್ಟದ ವಿವಿಧ ಪ್ರಾಕಾರಗಳಾದ ಗದ್ಯ, ಪದ್ಯ, ವಿಮರ್ಶೆ, ವ್ಯಾಕರಣ ಮುಂತಾದವುಗಳನ್ನು ಅಧ್ಯಯನ ಮಾಡಿದಲ್ಲಿ ಭಾಷೆಯ ಮಹತ್ವ ತಿಳಿಯಲು ಸಾಧ್ಯ. ಶಿಷ್ಟ ಮತ್ತು ಜಾನಪದ ಎರಡೂ ವಿಶೇಷತೆಗಳನ್ನು ಅರಿತುಕೊಳ್ಳುವುದು ಅಗತ್ಯ. ಶಿಷ್ಟ ಸಾಹಿತ್ಯದೊಂದಿಗೆ ಬಂಡಾಯ, ದಲಿತ, ಎಡ, ಬಲ ಎಲ್ಲ ಪಂಥದ ಸಾಹಿತ್ಯವನ್ನೂ ಓದಿ ಅರಗಿಸಿಕೊಳ್ಳಬೇಕು. ಭಾಷೆಯ ಮೇಲೆ ಮೋಹವಿರಲಿ, ಆದರೆ ವ್ಯಾಮೋಹ ಬೇಡ. ಇತರ ಭಾಷೆಗಳನ್ನು ನಿರಾಕರಿಸದಿರಿ. ಕನ್ನಡಕ್ಕೆ ಅಗ್ರಪಟ್ಟ ನೀಡಿ. ನೀವು ಏನೇ ಮಾಡಿದರೂ ಕನಸು ಕಾಣುವುದು ನಿಮ್ಮ ಮಾತೃಭಾಷೆ ಕನ್ನಡದಲ್ಲೇ ಎನ್ನುವುದನ್ನು ಮಾತ್ರ ಮರೆಯದಿರಿ ಎಂದು ಕಿವಿಮಾತು ಹೇಳಿದರು.

ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, 2500 ವರ್ಷಗಳ ಇತಿಹಾಸ, ಪರಂಪರೆ ಹೊಂದಿರುವ ಕನ್ನಡ ಭಾಷೆ ಇಂದಿಗೂ ದೇಶದಲ್ಲಿ ಅತ್ಯಂತ ವಿಶಿಷ್ಟ ಭಾಷೆಯಾಗಿ ನಿಂತಿದೆ. 8ಜ್ಞ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ದೇಶದ ಏಕೈಕ ಭಾಷೆ ಕನ್ನಡ. ಕರ್ನಾಟಕವೆಂದು ನಾಮಕರಣಗೊಂಡು 50 ವಸಂತಗಳು ತುಂಬಿದೆ. ಈ ಸಂದರ್ಭದಲ್ಲಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ತಾಯಿ ಭಾಷೆಯನ್ನು ಪ್ರೀತಿಸುವ, ಆಚರಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದರು.

ಸ್ಥಳೀಯ ಗಾಯಕರಾದ ಶೃಂಗೇಶ್ ಮತ್ತವರ ತಂಡ ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು. ಪದ್ಮಶ್ರೀ ಪುರಸ್ಕೃತ ಆದಿವಾಸಿ ಮುಖಂಡ ಸೋಮಣ್ಣ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಮಾರ್ ಅರಸೇಗೌಡ, ಹನಗೋಡು ನಟರಾಜ್, ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪುರಸ್ಕೃತ ರಾಮೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಕೆ.ಬಿ.ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಮಂಜು ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ನಿಕಟಪೂರ್ವ ಅಧ್ಯಕ್ಷ ಸೋಮಶೇಖರ್, ಅಧ್ಯಾಪಕರಾದ ಡಾ.ನಂಜುಂಡಸ್ವಾಮಿ, ಡಾ.ಕೆ.ಪಿ.ಪ್ರಸನ್ನ, ಎಂ.ಆರ್.ಬಸವಲಿಂಗಸ್ವಾಮಿ, ಪುಟ್ಟಶೆಟ್ಟಿ, ಕಸಾಪ ಪದಾಧಿಕಾರಿಗಳಾದ ಶ್ರೀನಿವಾಸ್, ಟಿ.ಲೋಕೇಶ್, ತ್ರಿನೇಶ್, ಚಿಲ್ಕುಂದ ಮಹೇಶ್, ಗುರುಸ್ವಾಮಿ, ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net