

ಚಿಕ್ಕೋಡಿ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಿ, ಶಿಸ್ತು ಸಹನೆ, ನಂಬಿಕೆ, ಪ್ರಾಮಾಣಿಕತೆ ಎಂಬ ಜೀವನದ ವೌಲ್ಯ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಗೋಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ ಹೇಳಿದರು.
ತಾಲೂಕಿನ ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಡಾ.ಎನ್.ಎ.ಮಗದುಮ ಸಿಬಿಎಸ್‌ಇ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ವೆಪಲ್ಲಿ ರಾಧಾಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಬದುಕಿಗೆ ಶಕ್ತಿಯಾಗಿ, ಜೀವಕ್ಕೆ ಉಸಿರಾಗಿ, ಒಬ್ಬ ವಿದ್ಯಾರ್ಥಿಗೆ ತಂದೆಯಾಗಿ, ತಾಯಿಯಾಗಿ ಗುರುವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಯಾರಿಗಾದರೂ ಇದ್ದರೆ ಅದು ಗುರುವಿಗೆ ಮಾತ್ರ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸುರೇಶ ಚೌಗುಲೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡಬೇಕು ಎಂದರು.
ಜಿ.ಎನ್.ಎಂ ಹಾಗೂ ಬಿ.ಎಸ್.ಸಿ ನರ್ಸಿಂಗ್ ವಿಭಾಗದ ಪ್ರಾಂಶುಪಾಲ ಬಿ.ಎಸ್.ಸಂಗಪ್ಪಗೋಳ, ಸಂಸ್ಥೆಯ ಕಾರ್ಯಾಧ್ಯಕ್ಷ ಸುರೇಶ ಚೌಗುಲೆ, ಖಜಾಂಚಿ ಲಲಿತಾ ಮಗದುಮ್, ಸಿಬಿಎಸ್‌ಇ ಪ್ರಾಂಶುಪಾಲ ಎನ್.ಎಸ್.ನಿಡುಗುಂದೆ, ಸೂರ್ಯಕಾಂತ ಮೋನೆ, ಉಪ ಪ್ರಾಚಾರ್ಯೆ ವೆಶಾಲಿ ಇಂಗಳೆ, ಸಂಚಿತಾ ಕೋರೆ, ಉಲ್ಕಾ ಘೋರ್ಪಡೆ, ದಿವ್ಯಾ ಪತ್ತಾರ ಇತರರು ಇದ್ದರು.