ವಿದ್ಯಾರ್ಥಿಗಳು ಇತಿಹಾಸ ಅರಿಯಲಿ

13 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನ ಕಬ್ಬಿಣದ ಕಡಲೆಯಂತೆ, ಸತತ ಪ್ರಯತ್ನ ಮತ್ತು ಅಧ್ಯಯನ ಶೀಲ ಗುಣ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆಯಬಹುದು ಎಂದು ಕವಿವಿ ಕುಲಸಚಿವ ಡಾ. ಚನ್ನಪ್ಪ ಎ. ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಕನಕ ಅಧ್ಯಯನ ಪೀಠದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗವು ಇತ್ತೀಚೆಗೆ ಆಯೋಜಿಸಿದ್ದ ಇತಿಹಾಸ ತಜ್ಞರ ಕಾರ್ಯಾಗಾರ, ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಎಂ.ಎ. ಪ್ರಥಮ ವರ್ಷ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ಅರಿಯಲಾರದವರು ಇತಿಹಾಸ ಸೃಷ್ಟಿಸಲಾರರು ಎಂಬ ಅಂಬೇಡ್ಕರರ ಮಾತಿನಂತೆ ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾದಷ್ಟು ಜಾಗತಿಕ ಇತಿಹಾಸ, ರಾಷ್ಟ್ರೀಯ ಮತ್ತು ರಾಜ್ಯದ ಇತಿಹಾಸ ಬಗ್ಗೆ ಸಂಪೂರ್ಣ ಜ್ಞಾನ ಪಡೆಯಬೇಕು. ಜೀವನದಲ್ಲಿ ಮಾರ್ಗ ಮತ್ತು ಮಾರ್ಗದರ್ಶಕರ ಅಗತ್ಯತೆ ಬಹುಮುಖ್ಯ ಎಂದರು.
ಪ್ರಾಧ್ಯಾಪಕ ಡಾ. ಎಲ್.ಪಿ. ಮಾರುತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸ್ಥಿರವಾದ ಗುರಿ ಹಾಗೂ ಸಮಯ ಪ್ರಜ್ಞೆ ಅವಶ್ಯ. ಪ್ರಯತ್ನ ಪಡದೆ, ಫಲಾಪೇಕ್ಷೆ ಮಾಡುವುದು ಮೂರ್ಖತನ. ವಿದ್ಯಾರ್ಥಿಗಳೇ ಅವರ ಜೀವನ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಿಲಾಧರ ಮುಗಳಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟದ ಸಮಯದಲ್ಲಿ ಕುಗ್ಗದೆ, ನಿರಂತರ ಓದುವಿಕೆಯಿಂದ ಮಾನಸಿಕ ಸ್ಥಿತಿ ಮತ್ತು ಕಷ್ಟ ಸಹಿಷ್ಣುತೆ ಭಾವನೆ ಗಟ್ಟಿಗೊಳ್ಳುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಭಾವನೆ ಹೆಚ್ಚಾಗಲಿ ಎಂದರು.
ಸಹಾಯಕ ಉಪನ್ಯಾಸಕರಾದ ಡಾ. ಜಗದೀಶ ಅಸೋದೆ, ಡಾ. ಆದಿತ್ಯ ಹೆಗಡೆ, ಡಾ. ಮಾಧುರಿ ಚೌಗಲೆ, ಇತರರು ಇದ್ದರು. ಶರಣ ಗೌಡ ಸ್ವಾಗತಿಸಿದರು. ಕೃಷ್ಣಾ ಕಾರಬಾರಿ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net