

ಕುಶಾಲನಗರ: ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಸ್ತುಬದ್ಧ ಜೀವನ ಮೈಗೂಡಿಸಿಕೊಳ್ಳುವುದರ ಜತೆಗೆ ಶ್ರಮ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಲು ಎನ್‌ಎಸ್‌ಎಸ್ ಒಂದು ಉತ್ತಮ ವೇದಿಕೆಯಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಅಭಿಪ್ರಾಯಪಟ್ಟರು.
ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಕೋಶ, ಕೊಡಗು ವಿಶ್ವವಿದ್ಯಾಲಯ, ಎನ್‌ಎಸ್‌ಎಸ್ ಪ್ರಾಂತೀಯ ಕೇಂದ್ರ, ಬೆಂಗಳೂರು ಎನ್‌ಎಸ್‌ಎಸ್ ರಾಜ್ಯ ಕೋಶ, ಸಂಯುಕ್ತಾಶ್ರಯದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್‌ಎಸ್‌ಎಸ್‌ನಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜಸೇವೆಯಂಥ ಮಾನವೀಯ ಮೌಲ್ಯಗಳ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವ ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಹಾಗಾಗಿ, ಶೈಕ್ಷಣಿಕ ಕಲಿಕೆಯ ಜತೆಗೆ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಕೋಶದ ಸಂಯೋಜಕಿ ಡಾ. ಗುಣಶ್ರೀ ಬಿ.ಎಸ್. ಮಾತನಾಡಿ, ಯುವ ಸಮುದಾಯದ ಸಬಲೀಕರಣ ಮತ್ತು ಸರ್ವತ್ತೋಮುಖ ಬೆಳವಣಿಗೆಗೆ ಎನ್‌ಎಸ್‌ಎಸ್ ಪೂರಕವಾಗಿದೆ. ಸಮಾಜಸೇವೆಯ ಪರಿಕಲ್ಪನೆಗೂ ಒತ್ತುಕೊಟ್ಟು ವಿದ್ಯಾರ್ಥಿಗಳ ಸವಾರ್ಂಗೀಣ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡುವುದು ಎನ್‌ಎಸ್‌ಎಸ್ ಧೇಯ. ವೈಯಕ್ತಿಕ-ಸಾಮಾಜಿಕ ಬೆಳವಣಿಗೆಗೆ ಹಾಗೂ ರಾಷ್ಟ್ರಾಭಿವೃದ್ಧಿಗೆ ಕಾರಣರಾಗಬೇಕು ಎಂಬುದು ಎನ್‌ಎಸ್‌ಎಸ್ ಆಶಯ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಜ್ಞಾನ ಕಾವೇರಿ ಆವರಣದಲ್ಲಿ ಸ್ವಚ್ಛತಾ ಶಿಬಿರದಲ್ಲಿ ಭಾಗವಹಿಸಿದರು.