

ಚನ್ನರಾಯಪಟ್ಟಣ : ವೈದ್ಯಕೀಯಕ್ಕೆ ಸಂಬಂಸಿದ ಅರೆ ವೈದ್ಯಕೀಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕು ಒಕ್ಕಲಿಗರ ಸಂಘದಿಂದ ಪಟ್ಟಣದ ಬಿಜಿಎಸ್ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಜಿನಿಯರಿಂಗ್ ಪದವಿಯಲ್ಲಿ ಕೃತಕ ಬುದ್ಧಿಮತೆ, ಸೈಬರ್ ಭದ್ರತೆ ಕೋರ್ಸ್‌ಗಳನ್ನು ತೆಗೆದುಕೊಳ್ಳುವುದರಿಂದ ಬೇಗ ಕೆಲಸ ಗಿಟ್ಟಿಸಿಕೊಳ್ಳಬಹುದು. ಕಲಾ ವಿಭಾಗದ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೆ ತಯಾರಿ ನಡೆಸಬೇಕು. ಕಲಿತ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಾಧ್ಯವಿಲ್ಲದ ಮಾತಾಗಿದ್ದು, ಅರಿವಿನ ಸಾಮರ್ಥ್ಯ ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಒಕ್ಕಲಿಗರ ಮೂರು ಸಂಘದಿಂದ ಮೈಸೂರಿನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲಾಗುವುದು. ತುಮಕೂರಿನಲ್ಲಿಯೂ 250 ಜನರಿಗೆ ಹೆಚ್ಚುವರಿಯಾಗಿ ಹಾಸ್ಟೆಲ್ ಸೌಲಭ್ಯ ವಿಸ್ತರಿಸಲಾಗುವುದು. ಪಟ್ಟಣದಲ್ಲಿ ಒಕ್ಕಲಿಗರ ಸಂಘದ ಚಟುವಟಿಕೆಗಳಿಗೆ 18 ಗುಂಟೆ ಜಾಗವನ್ನು ಕಾಯ್ದಿಸಲಾಗಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಹಾಸನ ಮತ್ತು ಕೊಡಗು ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಮಾತನಾಡಿ,
ಮಕ್ಕಳು ತಮ್ಮ ಜೀವನದುದ್ದಕ್ಕೂ ನೆರವಿಗೆ ಬರುವ ಧರ್ಮ, ಜ್ಞಾನ, ವಿವೇಕದ ಬುತ್ತಿಯನ್ನು ಕೊಂಡೊಯ್ಯಬೇಕು. ಸಮಯ ದುರುಪಯೋಗವಾಗದಂತೆ ಬಳಕೆ ಮಾಡಿಕೊಳ್ಳಬೇಕು. ಆಗಿದ್ದರೆ ಎತ್ತರಕ್ಕೆ ಬೆಳೆಯಬಹುದು. ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮಾಡಬೇಕು. ಅಹಂಕಾರ ಇದ್ದರೆ ಭವಿಷ್ಯ ಹಾಳಾಗುತ್ತದೆ. ವೌಲ್ಯಗಳನ್ನು ರೂಢಿಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶ ಗೌಡ ಕಾರ್ಯಕ್ರಮ ಉದ್ಘಾಟಿಸಿ ಉದ್ಘಾಟನಾ ನುಡಿಗಳನಾಡಿ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮ ಸದಾ ನಮ್ಮನ್ನು ಕಾಯುತ್ತದೆ. ಮೇಲು-ಕೀಳು ಎಂಬ ಭಾವನೆ ಅಪಾಯಕಾರಿ. ನಮ್ಮ ಸಂಸ್ಕಾರ ನಮ್ಮ ಮಕ್ಕಳಿಗೆ ಮಾದರಿ ಎನಿಸಬೇಕು. ಸಂಸ್ಕಾರ ರಹಿತ ಜ್ಞಾನ ಆರೋಗ್ಯಪೂರ್ಣವಲ್ಲ. ಉತ್ತಮ ಬದುಕು ಕಟ್ಟಿಕೊಳ್ಳುವ ದಾರಿಯನ್ನು ಕಂಡುಕೊಳ್ಳಬೇಕು. ಪ್ರತಿಭೆ ಎನ್ನುವುದು ಒಂದು ಕಾಲಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಮಕ್ಕಳ ಮೂಲಕ ಪಾಲಕರಿಗೆ ಗುರುತಿಸುವಂತಾದರೆ ಪಾಲಕರ ಜೀವನದಲ್ಲಿ ಅದೊಂದು ಅಮೂಲ್ಯ ಕ್ಷಣವಾಗುತ್ತದೆ. ಮಕ್ಕಳು ಈ ನಿಟ್ಟಿನಲ್ಲಿ ಮುಂದೆ ಸಾಗಬೇಕು. ಅಕಾರಿಗಳು, ರಾಜಕಾರಣಿಗಳು ರೈತ ಸ್ನೇಹಿ ಆಗಿರಬೇಕು. ಸಂಶೋಧನೆಗಳು ರೈತರಿಗೆ ಉಪಯೋಗ ಆಗುವಂತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅಂಕ ಗಳಿಸಿದ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕತ್ತರಿಘಟ್ಟ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಶಂಕರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ವಿ.ಜಯಪಾಲ್, ಸಂಘಟನಾ ಕಾರ್ಯದರ್ಶಿ ಬಿ.ರಾಜೇಶ್, ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟಸ್ವಾಮಿಗೌಡ, ಪರಿಸರವಾದಿ ಸಿ.ಎನ್.ಅಶೋಕ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಬಿ.ಎನ್. ಮಂಜೇಗೌಡ, ಕುವೆಂಪು ಸಂಘದ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಯೋಜನಾ ಪ್ರಾಕಾರದ ಮಾಜಿ ಅಧ್ಯಕ್ಷ ಎ.ಸಿ. ಆನಂದ್ ಕುಮಾರ್ ಭಾಗವಹಿಸಿದ್ದರು.