

ಚಿಕ್ಕೋಡಿ: ಪ್ರಯತ್ನವಿಲ್ಲದ ದೂರದೃಷ್ಟಿ ಹಗಲು ಕನಸು ಕಂಡಂತೆ. ವಿದ್ಯಾರ್ಥಿಗಳು ಹೆಚ್ಚು ವಿಜ್ಞಾನ ಬಳಕೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಡಾ. ಎಂ.ಟಿ.ಕುರಣಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ ವಿಜ್ಞಾನ, ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕ್ಯೂರಿಯಾಸಿಟಿ ಕಾರ್ನಿವಲ್ ಮತ್ತು ವಿಗ್‌ನ್ಯಾನಂ 3.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸತ್ಯ ಶೋಧನೆ ವಿಜ್ಞಾನದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಶಿಕ್ಷಣದಲ್ಲಿ ವಿಜ್ಞಾನ ಮತ್ತು ಪ್ರಾಯೋಗಿಕತೆಗೆ ಹೆಚ್ಚು ಒತ್ತು ನೀಡಬೇಕು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನ ಮತ್ತು ಕಾರ್ಯಾಗಾರ ಸರ್ಕಾರವು ಆಯೋಜಿಸುತ್ತಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಭಾರತವನ್ನು ಜಾಗತಿಕವಾಗಿ ನಂ.1 ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಮಹೇಶ ಬಾತೆ ಮಾತನಾಡಿ, ಕೆಎಲ್‌ಇ ಸಂಸ್ಥೆ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಬಿ.ಆರ್ ಪಾಟೀಲ ಅವರು ವಿನೂತನ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಫುಡ್ ಫೆಸ್ಟಿವಲ್ ಕಾರ್ಯಕ್ರಮದದಲ್ಲಿ ಬಗೆ ಬಗೆಯ ಖಾದ್ಯ ತಯಾರಿಸಿ ಮಾರಾಟ ಮಾಡಿ, ಸ್ವಾವಲಂಬನೆ ಅನುಭವ ಪಡೆದುಕೊಂಡರು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಎನ್.ಎಸ್.ವಂಟಮುತ್ತೆ, ಪದವಿ ಕಾಲೇಜು ಪ್ರಾಚಾರ್ಯ ಡಾ. ಬಿ.ಜಿ.ಕುಲಕರ್ಣಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರಕಾಶ ಕೋಳಿ, ಡಾ.ಎಸ್.ಎಂ.ಪಾಟೀಲ, ಮಹೇಶ ಮದಬಾವಿ, ಮಲ್ಲಿಕಾರ್ಜುನ ಜರಳಿ, ಮಂಥನ ಪಾಟೀಲ, ತಿಪ್ಪಣ್ಣ ಖೋತ, ಸಿದ್ಧಲಿಂಗ ಮಟ್ಟೆಪ್ಪನವರ, ವಿದ್ಯಾ ಉಗ್ರಾಣಿ, ಪ್ರಿಯಾ ಕುಂಬಾರ, ರಾಜೇಶ ನಾಯಕ ಇತರರಿದ್ದರು.