

ಮೈಸೂರು: ವಿದ್ಯಾರ್ಥಿಗಳು ಜ್ಞಾನ, ದೇಹದ ಸಾಮರ್ಥ್ಯ, ಕೌಶಲ, ಪರಿಶ್ರಮ, ಏಕಾಗ್ರತೆ, ಸಮಯ ಪ್ರಜ್ಞೆಯನ್ನು ರೂಢಿಸಿಕೊಂಡು ವಿವೇಕ ಬೆಳೆಸಿಕೊಳ್ಳಬೇಕು ಎಂದು ಆಧ್ಯಾತಿಕ ಚಿಂತಕ ಶಂಕರ್ ದೇವನೂರು ಹೇಳಿದರು.
ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ‘ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ಕುರಿತು ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಈ ನೆಲದ ಸಾಮರ್ಥ್ಯವನ್ನು ಅರಿತು ಪ್ರಕೃತಿಯೊಂದಿಗೆ ಅನುಸಂಧಾನ ಮಾಡಿಕೊಂಡಾಗ ಮಾತ್ರ ಅವರು ತಮ್ಮ ಗುರಿಯನ್ನು ತಲುಪಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳ ಗುರಿ ಅಚಲವಾಗಿರಬೇಕು. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬ ವಿವೇಕ ಇರಬೇಕು ಎಂದು ಸಲಹೆ ನೀಡಿದರು
ಉನ್ನತ ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹಿಸುವುದಷ್ಟೇ ಅಲ್ಲ, ಅದು ಜೀವನದಲ್ಲಿ ಸಾಮರಸ್ಯದಿಂದ ಬದುಕುವುದನ್ನು ತಿಳಿಸುತ್ತದೆ. ಶಿಕ್ಷಣದ ಮಹತ್ವ ಬೇರ್ಪಡಿಸುವುದಲ್ಲ ಸೇರ್ಪಡಿಸುವುದು ಎಂದರು.
ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ದಾಸರಾಗಬೇಕು. ವಿದ್ಯಾರ್ಥಿಯ ಕಾಲ ಎಂದರೆ ಜ್ಞಾನ ಸಂಗ್ರಹಣೆಯ ಕಾಲ. ಆದ್ದರಿಂದ ಬುದ್ಧಿಯನ್ನು ಮಸೆದು ಭಾವವನ್ನು ಕಡೆದು ತತ್ವಜ್ಞರ ಬದುಕನ್ನು ಅರಿಯಬೇಕು ಎಂದರು.
ವಿದ್ಯಾರ್ಥಿಗಳು ಯಾವ ಕಡೆಗೆ ಹೋದರೆ ಬದುಕು ಹಾಳಾಗುತ್ತದೆಯೋ ಅಂತಹ ಕಡೆ ಗಮನಹರಿಸಬಾರದು. ತಮ್ಮ ಬದುಕು ಎಂಬ ಅಭ್ಯುದಯದ ಬೇರಿಗೆ ಬಿಸಿ ನೀರನ್ನು ಎರೆಯಬಾರದು ಎಂದು ಕಿವಿಮಾತು ಹೇಳಿದರು.
ಮೊಬೈಲ್ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ಬೇರೆಯವರಿಗೆ ಅವಲಂಬಿತರಾಗಿ ಬದುಕಬಾರದು ಎಂದರು.
ಶಂಕರ್ ದೇವನೂರು ಮತ್ತು ಅನಸೂಯ ದಂಪತಿಯನ್ನು ಸನಾನಿಸಲಾಯಿತು.
ಪ್ರಾಂಶುಪಾಲರಾದ ಡಾ. ಬಿ.ಆರ್.ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್.ತಿಮ್ಮೇಗೌಡ, ಸಹ ಕನ್ನಡ ಪ್ರಾಧ್ಯಾಪಕಿ ಡಾ. ವಿನೋದಮ್ಮ, ಸಹಾಯಕ ಕನ್ನಡ ಪ್ರಾಧ್ಯಾಪಕ ಎಂ.ನಾಗೇಶ್, ಸಿ.ಎಂ.ಕಿರಣ್‌ಕುಮಾರ್, ಜೆ.ಮನೋಜ್‌ಕುಮಾರ್, ನಾಗಶ್ರೀ ಇತರರಿದ್ದರು