ವಿದ್ಯಾರ್ಥಿಗಳು ಜೀವನೋತ್ಸಾಹದ ಗಣಿಗಳಾಗಲಿ

mysore
Published on

ಮೈಸೂರು: ವಿದ್ಯಾರ್ಥಿಗಳು ಸೇವಾ ಮನೋಭಾವ ಮೈಗೂಡಿಸಿಕೊಂಡು ಜೀವನೋತ್ಸಾಹದ ಗಣಿಗಳಾಗಬೇಕು ಎಂದು ಮಹಾರಾಣಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಎಂ. ಮಮತಾ ಹೇಳಿದರು.


ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.


ಸಮಾಜದ ಉನ್ನತ ವರ್ಗಗಳ ವಿದ್ಯಾರ್ಥಿಗಳೊಂದಿಗೆ ಕೆಳವರ್ಗದ ಮಕ್ಕಳು ಸ್ಪರ್ಧಿಸಲು ಪ್ರತಿಭೆ, ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯೆಯಿಂದ ಗೌರವ ಸಿಗುತ್ತದೆ. ಪಾಲಕರು ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಬಾಲ್ಯವಿವಾಹ ಮಾಡಿಸಬಾರದು ಎಂದು ತಿಳಿಸಿದರು.


ವಿದ್ಯಾಭ್ಯಾಸದೊಂದಿಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಜತೆಗೆ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆದರ್ಶ ನಡೆ-ನುಡಿಯ ಮೂಲಕ ಸಮಾಜಮುಖಿಯಾಗಬೇಕು ಎಂದು ಹೇಳಿದರು.


2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ 96 ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಜೆಎಸ್‌ಎಸ್ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ, ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ, ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಪಿ. ರಾಜೇಶ್ವರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net