

ಗುಳೇದಗುಡ್ಡ: ವಿದ್ಯಾರ್ಥಿಗಳು ಜೀವನದಲ್ಲಿ ತಾಳ್ಮೆ, ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನದಿಂದ ಉನ್ನತ ಸ್ಥಾನ ಪಡೆಯಬಹುದು. ನಿರಂತರ ಅಧ್ಯಯನಶೀಲರಾಗಬೇಕೆಂದು ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಶಿರೂರಿನ ಗುರಮ್ಮ ಸಂಕೀನಮಠ ಹೇಳಿದರು.
ಸ್ಥಳೀಯ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊಬೈಲ್ ಮಿತವಾಗಿ ಬಳಸಬೇಕು. ಹಿರಿಯರು, ತಂದೆ ತಾಯಿಗಳ ಮತ್ತು ಶಿಕ್ಷಕರ ಮಾತು ಕೇಳಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಶಾಲೆ ಚೇರ್ಮನ್ ಅಶೋಕ ಹೆಗಡಿ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಗೆ ಮಹತ್ವ ನೀಡದೆ ಬದುಕಿನಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ಎನ್ನುವುದು ಅಮೂಲ್ಯ ಆಸ್ತಿ. ಅದನ್ನು ವಿದ್ಯಾರ್ಥಿಗಳು ವ್ಯರ್ಥ ಮಾಡಿಕೊಳ್ಳಬಾರದು ಎಂದರು.
ಸಂಸ್ಥೆ ಗೌರವ ಕಾರ್ಯದರ್ಶಿ ಆರ್.ಎಂ. ಪಟ್ಟಣಶೆಟ್ಟಿ, ಸದಸ್ಯ ವಿ.ಎಂ. ಕಾವಡೆ ಮಾತನಾಡಿದರು. ವಿದ್ಯಾರ್ಥಿಗಳಾದ ಪ್ರಶಾಂತ, ಪಜ್ವಲ, ಸಿದ್ಧಾರ್ಥ, ಆದಿತ್ಯ, ಅ್ಸಾ ಮತ್ತು ಸೃಷ್ಠಿ ತಮ್ಮ ಶಾಲಾ ಅನುಭವ ಹಂಚಿಕೊಂಡರು.
ಸಂಸ್ಥೆ ಸದಸ್ಯರಾದ ಎಸ್.ಎನ್. ಪಾಲಪಾಣಿ, ಪಿ.ಎಂ. ಝಂವರ, ಎ.ಡಿ. ಕೊಪ್ಪಳ, ಮುಖ್ಯ ಶಿಕ್ಷಕಿ ಜೆ.ಜೆ. ಲೋಬೋ, ವಿ. ಬಿ. ಹಳ್ಳೂರ, ಎಸ್. ಎಂ. ಕರಡಿಗುಡ್ಡ, ಶಿಕ್ಷಕರಾದ ಬಿ.ಐ. ಯಳಮೇಲಿ, ಭಾಗ್ಯಶ್ರೀ ಶೆಟ್ಟರ್ ಇತರರಿದ್ದರು.