

ಮೈಸೂರು: ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ 527 ಸೈನಿಕರ ಕಥೆಗಳನ್ನು ಪಠ್ಯದಲ್ಲಿ ಸೇರಿಸಬೇಕು ಎಂದು ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕ ಕಿಶೋರ್ ಕದಂ ಆಗ್ರಹಿಸಿದರು.
ಎಚ್.ಡಿ. ಕೋಟೆ ತಾಲೂಕು ಜಿ.ಬಿ. ಸರಗೂರಿನ ಶ್ರೀ ಗಣೇಶ ಕಲ್ಚರ್ ಆ್ಯಂಡ್ ಎಜುಕೇಷನ್ ಟ್ರಸ್ಟ್
ತಿಲಕ್‌ನಗರದ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಲ್ಲಿ ಒಬ್ಬೊಬ್ಬರ ಕಥೆಯೂ ಒಂದೊಂದು ರೀತಿ ಇದೆ. ಆದರೆ ಎಲ್ಲವೂ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾದವು. ನಾವು ಮಕ್ಕಳಿಗೆ ಏನೇನೋ ಕಲಿಸುವ ಬದಲು ಈ ರೀತಿಯ ಕಥೆಗಳನ್ನು ಕಲಿಸಬೇಕು. ಇದರಿಂದ ದೇಶಭಕ್ತಿ ಮೂಡುತ್ತದೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧಕ್ಕಿಂತ ಮುಂಚೆ ಸೈನಿಕರ ಸಂಬಳ, ಸೌಲಭ್ಯಗಳು ಹೆಚ್ಚಿರಲಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳು ಇರಲಿಲ್ಲ. ವಾಜಪೇಯಿ ಅವರು ಪ್ರಧಾನಿಯಾದ ನಂತರ ಪರಿಸ್ಥಿತಿ ಸುಧಾರಿಸಿದೆ ಎಂದರು.
ಅಗ್ನಿವೀರ್ ಯೋಜನೆಯಿಂದ ಯಾವುದೇ ಉಪಯೋಗವಾಗುವುದಿಲ್ಲ. ನಾಲ್ಕೈದು ವರ್ಷ ತರಬೇತಿ ಪಡೆದವರನ್ನು ನಂಬಿ ನಾವು ಯುದ್ಧ ಮಾಡಲಾಗುವುದಿಲ್ಲ. ಆದ್ದರಿಂದ ಸೈನಿಕರ ನೇಮಕಾತಿಯಲ್ಲಿ ಮೊದಲೇ ಚೆನ್ನಾಗಿತ್ತು ಎಂದು ತಿಳಿಸಿದರು.
ಜಾನಪದ ಗಾಯಕ ಅಮ್ಮ ರಾಮಚಂದ್ರ, ಶಿಕ್ಷಣ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ. ರವೀಶ್ ಕುಮಾರ್, ಸಂತೃಪ್ತಿ ಕುಟುಂಬದ ಅಶೋಕ್, ಯುವರಾಜ್, ಆನಂದ್, ಲಲಿತಾ ಜುವೆಲರ್ಸ್ ಲೆಕ್ಕ ಪರಿಶೋಧಕ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯಶಿಕ್ಷಕ ಸತೀಶ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇನ್ನಿತರರಿದ್ದರು