ಮೈಸೂರು: ನಗರದ ಗನ್‌ಹೌಸ್ ಬಳಿಯ ಪ್ರತಿಮೆ ವಿಷಯವನ್ನು ರಾಜವಂಶಸ್ಥರು ಹಾಗೂ ಸುತ್ತೂರು ಶ್ರೀಮಠ ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಮನವಿ ಮಾಡಿದರು.
ಸೌಂದರ್ಯದ ನಗರದಲ್ಲಿ ಡಾ.ರಾಜೇಂದ್ರ ಶ್ರೀಗಳ ಪ್ರತಿಮೆಗೆ ಬಟ್ಟೆ ಸುತ್ತಿ ನಿಲ್ಲಿಸಿರುವುದು ಸರಿಯಲ್ಲ. ಪ್ರತಿಮೆ ಸ್ಥಾಪನೆ ವಿಷಯ ವಿವಾದದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಹಾಗಾಗಿ ಮಾತುಕತೆಯೇ ಇದಕ್ಕೆ ಪರಿಹಾರ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿವಾದಿತ ಜಾಗದಲ್ಲಿ ರಾಜವಂಶಸ್ಥರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ಸ್ಥಾಪಿಸಬೇಕು ಎಂದರೆ, ಮಠದ ಭಕ್ತರು ಡಾ.ಶ್ರೀರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪನೆ ಮಾಡಬೇಕು ಎನ್ನುವ ಬಯಕೆ ಇಟ್ಟಿದ್ದಾರೆ. ಈಗ ಶ್ರೀಗಳ ಪ್ರತಿಮೆ ಇಟ್ಟಿದ್ದು, ಅಲ್ಲಿನ ಪ್ರತಿಮೆಯನ್ನು ಹಾಗೆಯೇ ಬಿಡುವುದು ಅಥವಾ ತೆರವುಗೊಳಿಸುವುದು ಎರಡೂ ಬಹಳ ನಾಜೂಕಿನ ವಿಷಯವಾಗಿದೆ ಎಂದರು.
ಹೀಗಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಸ್ಯೆ ಬಗೆಹರಿಸಲು ಮುಂದಾಗಲಿ. ತಮಗೆ ಅರಮನೆ ಬಗ್ಗೆ ಗೌರವವಿದೆ. ಇದೇ ವೇಳೆ ರಾಜೇಂದ್ರ ಶ್ರೀಗಳು ಅನ್ನ, ಅಕ್ಷರ ದಾಸೋಹದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಹೀಗಾಗಿ ಆ ವೃತ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪಿಸಿ ಅನಾವರಣಗೊಳಿಸುವ ವಿಷಯದಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡು ವಿವಾದ ಮಾಡುವುದು ಬೇಡ ಎಂದು ಕೋರಿದ್ದಾರೆ.
ಟೆನಿಸ್ ಅಕಾಡೆಮಿ ಅಧ್ಯಕ್ಷ ವಾಸು ಇದ್ದರು.