ಸರ್ಕಾರಿ ಸ್ವಾಮ್ಯದ ವಿಮೆ ಕಂಪನಿಗೆ ಅವಕಾಶ ನೀಡಲಿ

Bhoomipooje
Published on

ಹಾನಗಲ್ಲ: ಖಾಸಗಿ ವಿಮಾ ಕಂಪನಿಗಳು ಬೆಳೆ ವಿಮೆ ಟೆಂಡರ್ ಪಡೆಯುತ್ತಿರುವುದರಿಂದ ಬೆಳೆ ವಿಮೆ ವಿಷಯದಲ್ಲಿ ರೈತರು ಬಹಳಷ್ಟು ವಂಚನೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಬದಲಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ವಿಮೆ ಕಂಪನಿಗಳು ಪಾಲ್ಗೊಳ್ಳುವಂತಾದರೆ ರೈತರಿಗಾಗುವ ಅನ್ಯಾಯ ತಡೆಗಟ್ಟಬಹುದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯ 1 ಕೋಟಿ ರೂಪಾಯಿ ವೆಚ್ಚದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಖಾಸಗಿ ಕಂಪನಿಗಳು ಲಾಭಕ್ಕಾಗಿ ವಿಮೆ ಕೈಗೊಳ್ಳುತ್ತಿವೆ. ವಿಮೆಯ ಮೂಲ ಉದ್ದೇಶಕ್ಕೆ ಹೊಡೆತ ಬೀಳುವಂತಾಗಿದೆ. ಸರ್ಕಾರದ ವಿಮಾ ಕಂಪನಿಗಳು ರೈತರ ಪರವಾದ ನಿಲುವು ತಾಳುತ್ತವೆ. ಈ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಾವೇರಿ ಹಾಗೂ ಕಲಬುರ್ಗಿ ಜಿಲ್ಲೆಯ ಶಾಸಕರು ಚರ್ಚಿಸಿದ್ದೇವೆ. ಮುಂದಿನ ವರ್ಷದಲ್ಲಾದರೂ ಕೇಂದ್ರ ಸರ್ಕಾರಿ ಸ್ವಾಮ್ಯದ ವಿಮೆ ಕಂಪನಿಗಳಿಗೇ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.

ವಿವಿಧ ಸಮಸ್ಯೆಗಳ ಕುರಿತು ರೈತ ಸಂಘಟನೆಗಳು ಸರ್ಕಾರಕ್ಕೆ ಸಲಹೆ ನೀಡುವ ಅಗತ್ಯವಿದೆ. ರೈತರ ಅಸಹಾಯಕ ಪರಿಸ್ಥಿತಿಯನ್ನು ದೂರಗೊಳಿಸಬೇಕಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ರೈತರ ಕಾರ್ಯಾಗಾರ ಆಯೋಜಿಸಿ ಕೃಷಿ-ತೋಟಗಾರಿಕೆಯ ಸಮಸ್ಯೆಗಳ ಕುರಿತು ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಗಳನ್ನೂ ಕಂಡುಕೊಳ್ಳಬೇಕಾಗಿದೆ. ಹಲವು ದಶಕಗಳಿಂದ ಕೈಗೊಂಡಿರುವ ಕೃಷಿ-ತೋಟಗಾರಿಕೆಯ ಅನುಭವವನ್ನು ಬಳಸಿಕೊಂಡು ಇರುವ ಸಂಪನ್ಮೂಲಗಳಲ್ಲಿಯೇ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.

ಕೃಷಿಕ ಸಮಾಜ ಅಧ್ಯಕ್ಷ ಬಸವರಾಜ ಯಲಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಪುರಸಭೆ ಮಾಜಿ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ರೈತ ಸಂಘದ ಅಧ್ಯಕ್ಷರಾದ ಮರಿಗೌಡ ಪಾಟೀಲ, ಎಂ.ಎಸ್.ಪಾಟೀಲ, ಗುತ್ತಿಗೆದಾರ ಜಯಪ್ರಕಾಶ ಉಪಸ್ಥಿತರಿದ್ದರು. ಎಡಿಎ ಕೆ.ಮೋಹನಕುಮಾರ ಸ್ವಾಗತಿಸಿದರು. ಕೃಷಿ ಸಹಾಯಕ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net