

ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ರೈತರಿಂದಲೇ ಅಕ್ಕಿ ಖರೀದಿ ಮಾಡಲಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತವಾಗಿ ಕೊಡುವ ಅನ್ನಭಾಗ್ಯಕ್ಕೆ ಅಗತ್ಯವಿರುವ ಹೆಚ್ಚುವರಿ ಅಕ್ಕಿ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ರಾಜ್ಯ ಸರ್ಕಾರ ತನ್ನ ಪಾಲಿನ ಐದು ಕೆಜಿ ಅಕ್ಕಿಯನ್ನು ಹೊರ ರಾಜ್ಯಗಳಿಂದ ಖರೀದಿ ಮಾಡಲು ಮುಂದಾಗಿರುವುದು ಸರಿಯಲ್ಲ. ಬೇರೆ ರಾಜ್ಯಗಳ ಮೇಲಿನ ಅವಲಂಬನೆಯನ್ನು ಬಿಟ್ಟು ನಮ್ಮ ರೈತರಿಂದಲೇ ಅಕ್ಕಿ ಖರೀದಿಸುವ ಯೋಜನೆಗೆ ಮುಂದಾಗಬೇಕು. ಅಕ್ಕಿಯ ಬದಲಿಗೆ ರಾಗಿ, ಮತ್ತು ಜೋಳ ಖರೀದಿಸಿ ಪಡಿತರ ವಿತರಣೆ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ಹೈದರಾಬಾದಿನಲ್ಲಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌಷ್ಟಿಕಾಂಶ ನಿರ್ವಹಣಾ ಬ್ಯೂರೋ ಪ್ರಕಾರ ಪ್ರತಿ ವ್ಯಕ್ತಿ ಆರೋಗ್ಯ ಕಾಪಾಡಿಕೊಳ್ಳಲು ಕನಿಷ್ಠ 400 ಗ್ರಾಂ ಅಕ್ಕಿ, ಗೋಧಿ, ಮುಂತಾದ ಏಕದಳ, ಧಾನ್ಯ ಸೇವಿಸಬೇಕಾಗಿದೆ. ಈ ಪ್ರಕಾರ ತಿಂಗಳಿಗೆ ಕನಿಷ್ಠ 10 ಕೆ.ಜಿ ಧಾನ್ಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲೇ ಬೆಳೆಯಲಾಗುವ ಜೋಳ ಮತ್ತು ರಾಗಿಯನ್ನು ಸ್ವಾಮಿನಾಥನ್ ಶಿಫಾರಸ್ಸಿನ ಬೆಂಬಲ ಬೆಲೆಯಲ್ಲಿ ಕೊಂಡುಕೊಳ್ಳಲು ಮುಂದಾದರೆ, ನಮ್ಮ ರಾಜ್ಯದ ರೈತರೇ ಅಕ್ಕಿ, ರಾಗಿ, ಜೋಳ ಮತ್ತು ಇತರೆ ದ್ವಿದಳಧಾನ್ಯಗಳನ್ನು ಪೂರೈಸಲು ಶಕ್ತರಿದ್ದಾರೆ. ಈ ಸಂಬಂಧ ಸರ್ಕಾರ ಚಿಂತನೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಮಂತ್ರಿಗಳಿಗೆ ಪತ್ರ ಬರೆಯಲಿದೆ ಎಂದು ತಿಳಿಸಿದರು.
ತಕ್ಷಣಕ್ಕೆ ಅಗತ್ಯವಿರುವಷ್ಟು ಪ್ರಮಾಣದ ರಾಗಿ ಮತ್ತು ಜೋಳ ಸಿಗದಿರಬಹುದು. ಈಗ ಮುಂಗಾರಿನ ಬಿತ್ತನೆಗೆ ರೈತರು ತಯಾರಿ ನಡೆಸುತ್ತಿದ್ದಾರೆ. ವೆಚ್ಚದ ಮೇಲೆ ಶೇ.50ರಷ್ಟು ಲಾಭ ತರುವ ಸ್ವಾಮಿನಾಥನ್ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ಖರೀದಿಸುವ ಆಶ್ವಾಸನೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈ ಧಾನ್ಯಗಳು ಖಂಡಿತ ದೊರೆಯತ್ತವೆ. ಇವುಗಳ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ 2014-2021ರಲ್ಲಿ ನೀಡಿರುವ ವರದಿಯನ್ನು ಜಾರಿಗೆ ತರಬೇಕು ಎಂದು ಕಿವಿಮಾತು ಹೇಳಿದರು.
ಕೇಂದ್ರದ ಗೋದಾಮುಗಳಲ್ಲಿ ದಾಸ್ತಾನು ಇದ್ದರೂ ಒಕ್ಕೂಟ ಸರ್ಕಾರ ರಾಜ್ಯಕ್ಕೆ ಅಕ್ಕಿ ಬಿಡುಗಡೆ ಮಾಡದಿರುವುದು ಸರಿಯಲ್ಲ. ಅಕ್ಕಿ ದಾಸ್ತಾನಿಲ್ಲದಿದ್ದರೆ ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಬಹುದಿತ್ತು. ಆದರೆ, ಅಗತ್ಯ ದಾಸ್ತಾನಿದ್ದರೂ ಪೂರೈಕೆ ಮಾಡದೇ ಇರುವುದು ದ್ವೇಷದ ರಾಜಕಾರಣ ಎಂದು ಕಿಡಿಕಾರಿದರು.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನ ಎನ್. ಗೌಡ, ಮಂಡಕಳ್ಳಿ ಮಹೇಶ್, ಪಿ.ಮರಂಕಯ್ಯ, ರವಿಕಿರಣ್ ಪೂಣಚ್ಚ ಹಾಜರಿದ್ದರು.